Mangalore: ನಾರಾಯಣಗುರು ವಸತಿ ಶಾಲೆಗೆ ಶಂಕುಸ್ಥಾಪನೆ
Sunday, January 21, 2024
ಮಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 18 ಕೋಟಿ ರೂ. ವೆಚ್ಚದಲ್ಲಿ ಪೂಂಜಾಲಕಟ್ಟೆಯಲ್ಲಿ ನಿರ್ಮಾಣ ಗೊಳ್ಳಲಿರುವ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ ಹಿಂದುಳಿದಿದ್ದ ವರ್ಗಗಳಿಗೆ ನಾರಾಯಣ ಗುರುಗಳು ಶಕ್ತಿ ತುಂಬಿದ್ದರು. ಅವರ ಹೆಸರಿನಲ್ಲಿ ಪೂಂಜಾಲಕಟ್ಟೆಯ 15 ಎಕರೆ ಜಮೀನಿನಲ್ಲಿ ವಸತಿ ಶಾಲೆ ನಿರ್ಮಾಣಗೊಳ್ಳಲಿರುವುದು ಶ್ಲಾಘನೀಯ. 250 ವಿದ್ಯಾರ್ಥಿಗಳಿಗೆ ನಾರಾಯಣ ಗುರು ವಸತಿ ಶಾಲೆಯಲ್ಲಿ ಅವಕಾಶ ದೊರಕಲಿದೆ ಎಂದು ಹೇಳಿದರು.
ವಸತಿ ಶಾಲೆಯ ಕಂಪೌಂಡ್ ನಿರ್ಮಾಣ ಸೇರಿದಂತೆ ಪೂರಕ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಅಗತ್ಯ ಬಿದ್ದರೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿ.ಪಂ. ಸಿಇಓ ಡಾ. ಆನಂದ್ ಮತ್ತಿತರರು ಉಪಸ್ಥಿತರಿದ್ದರು.
