Chikkamagaluru: ಶಾನುಬೋಗನಹಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ
ಚಿಕ್ಕಮಗಳೂರು: ಸಂವಿಧಾನ ಜಾಗೃತಿ ಜಾಥಾವು ಫೆಬ್ರವರಿ 14 ರಂದು ತರೀಕೆರೆ ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದು, ಶಾನುಬೋಗನಹಳ್ಳಿ, ಬಗ್ಗವಳ್ಳಿ, ಅತ್ತಿಮೊಗ್ಗೆ, ಸೊಕ್ಕೆ, ಅಜ್ಜಂಪುರ ತಾಲ್ಲೂಕಿನ ಜಾವೂರು, ಚಿಕ್ಕನವಂಗಲ ಹಾಗೂ ಅಜ್ಜಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿತು.
ಪ್ರಥಮವಾಗಿ ಶಾನುಬೋಗನಹಳ್ಳಿ ಗ್ರಾಮ ಪಂಚಾಯತಿಗೆ ಆಗಮಿಸಿದ ಜಾಗೃತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು, ಶಾಲಾ ಮಕ್ಕಳು, ಅಂಗನವಾಡಿ ಸಿಬ್ಬಂದಿಗಳು, ಸ್ವಸಹಾಯ ಸಂಘಗಳು, ಸ್ತೀ ಶಕ್ತಿ ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರು ಸಂಭ್ರಮದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು.
ಶಾಲಾ ಮಕ್ಕಳು, ಛದ್ಮವೇಷಧಾರಿಗಳು, ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ, ಆಟೋ ರ್ಯಾಲಿ, ಬೈಕ್ ರ್ಯಾಲಿ, ಟ್ರ್ಯಾಕ್ಟರ್ನಲ್ಲಿ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಡ್ರಂಸೆಟ್ ವಾದ್ಯ, ತಮಟೆ ವಾದ್ಯ, ಛದ್ಮವೇಷ, ವೀರಗಾಸೆ ಕುಣಿತ, ಡೊಳ್ಳು ವಾದ್ಯದೊಂದಿಗೆ ಎನ್.ಸಿ.ಸಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಂತರ ಪ್ರಾಂಶುಪಾಲರು ಮತ್ತು ಶಿಕ್ಷಕರಿಂದ ಸಂವಿಧಾನ ಪೀಠಿಕೆ ಭೋದಿಸಲಾಯಿತು. ಶಾಲಾ ಮಕ್ಕಳು ದೇಶಭಕ್ತಿ ಗೀತೆ ಹಾಡಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಬಗ್ಗವಳ್ಳಿ ಶಾಲಾ ಮಕ್ಕಳು ಮೂಲಭೂತ ಹಕ್ಕುಗಳ ಬಗೆಗಿನ ಹಾಡನ್ನು ಹಾಡಿದರು ಮತ್ತು ಕಿರುನಾಟಕ ಪ್ರದರ್ಶಿಸಿದರು. ತರೀಕೆರೆ ತಾ. ಶಾನುಬೋಗನಹಳ್ಳಿ ಶಿಕ್ಷಕರು ಸಂವಿಧಾನದ ರಚನೆ ಬಗ್ಗೆ, ಉದ್ದೇಶ ಹಿನ್ನಲೆ ಹಾಗೂ ಸಂವಿಧಾನದ ಜಾಗೃತಿ ಕುರಿತು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.







