Chikkamagaluru: ಶಿವ ಶರಣರು, ವಚನಕಾರರು ಸಮಾಜದ ಆಸ್ತಿ: ತಿಪ್ಪೇರುದ್ರಪ್ಪ
ಚಿಕ್ಕಮಗಳೂರು: ಶಿವ ಶರಣರು, ವಚನಕಾರರು ಸಮಾಜದ ಶಾಶ್ವತ ಆಸ್ತಿ, ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜೊತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದ್ದು ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ತಿಪ್ಪೇರುದ್ರಪ್ಪ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಫೆ.1 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು, 12ನೇ ಶತಮಾನದ ಕಾಲದಲ್ಲಿ ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶಗಳು ಇಂದಿನ ಸಮಾಜಕ್ಕೆ ಪ್ರೇರಣೆಯಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವವಾದುದು, ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ ಮಡಿ ಹಾಸಿ ಸ್ವಾಗತಿಸುವ ಕೆಲಸ ಅವರದ್ದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲ ಎಂದ ಅವರು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಮಹತ್ತರವಾದದ್ದು, ಶರಣ ಧರ್ಮ ರಕ್ಷಣೆ, ವಚನ ಸಾಹಿತ್ಯದ ದಂಡ ನಾಯಕತ್ವ ಜವಾಬ್ದಾರಿ ಹೊತ್ತು ಬಸವಣ್ಣ, ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ಭೀಮ ರಕ್ಷೆಯಾಗಿ ನಿಂತರು ಎಂದು ಹೇಳಿದರು.
ಚಿಕ್ಕಮಗಳೂರು ತಹಸೀಲ್ದಾರ್ ಡಾ. ಸುಮಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮ್ಮ ಕಾಯಕದ ಮೂಲಕ ಸಮಾಜದಲ್ಲಿರುವ ಅಧರ್ಮ, ಅಸಂಸ್ಕೃತಿಯ ಕೊಳಕನ್ನು ಹೋಗಲಾಡಿಸಿದ ಕಾಯಕ ಯೋಗಿ ಮಡಿವಾಳ ಮಾಚಿದೇವರು ಅವರ ಆದರ್ಶಗಳು ಇಂದಿನ ಸಮಾಜದ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿವೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಸ್ವಾಗತಿಸಿದರು.
ಉಪವಿಭಾಗಾಧಿಕಾರಿಗಳ ಕಚೇರಿಯ ಡೆಪ್ಯುಟಿ ತಹಸೀಲ್ದಾರ್ ಶಾರದ, ರಾಜ್ಯ ಮಡಿವಾಳ ಸಂಘದ ಕಾರ್ಯದರ್ಶಿ ರಾಮಚಂದ್ರ, ಮಡಿವಾಳ ಸಂಘದ ಚಿಕ್ಕಮಗಳೂರು ಶಾಖೆ ಅಧ್ಯಕ್ಷ ಕೆ.ಎಂ. ಬಸವರಾಜು, ಉಪಾಧ್ಯಕ್ಷ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.


