Chikkamagaluru: ಮಹಾತ್ಮರು ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ: ಎಚ್.ಡಿ. ತಮ್ಮಯ್ಯ
ಚಿಕ್ಕಮಗಳೂರು: ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿ ಈ ಮಹಾತ್ಮರೆಲ್ಲ ಯಾವುದೋ ಒಂದು ಜಾತಿ ವರ್ಗ ಅಥವಾ ಧರ್ಮಕ್ಕೆ ಸೇರಿದವರಲ್ಲ ಅವರೆಲ್ಲರೂ ಈ ಸಮಾಜದ ಆಸ್ತಿ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಎಐಟಿ ಕಾಲೇಜು ಮುಂಭಾಗ ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಾಂಪೌಂಡ್ ಹಾಗೂ ಇತರೆ ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಮಹಾತ್ಮರೆಲ್ಲರದು ವಿಚಾರಧಾರೆಗಳು ಒಂದೇ ಆಗಿವೆ ಸಮಾನತೆಗಾಗಿ ಶೋಷಿತರ ಉದ್ಧಾರಕ್ಕಾಗಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಲು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಇವರೆಲ್ಲರೂ ಹೋರಾಟ ನಡೆಸಿದರು ಹಾಗಾಗಿ ಅವರೆಲ್ಲರೂ ಮಹಾಪುರುಷರಾಗಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ಸಮುದಾಯ ಭವನಗಳನ್ನು ರಾಜ್ಯದಲ್ಲಡೆ ನಿರ್ಮಿಸಲಾಗುತ್ತಿದೆ ಚಿಕ್ಕಮಗಳೂರಿನಲ್ಲೂ ನಿರ್ಮಾಣವಾಗುತ್ತಿದ್ದ ಸಮುದಾಯ ಭವನ ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಅದನ್ನು ಮರು ಆರಂಭಿಸಲಾಗಿದೆ ಅದಕ್ಕಾಗಿ ರಾಜ್ಯ ೭೫ ಲಕ್ಷ ರೂ ನೀಡಿದೆ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಎಲ್ಲಾ ಸಮುದಾಯಗಳ ಬಡವರಿಗೂ ಕಡಿಮೆ ದರದಲ್ಲಿ ನೀಡಲಾಗುವುದು ಅದನ್ನು ಎಲ್ಲರೂ ಸದಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ, ವಾಲ್ಮೀಕಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ದಲಿತ ಸಂಘನೆಗಳ ಮುಖಂಡ ರಾಧಾಕೃಷ್ಣ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.



