Chikkamagaluru: ಸಂವಿಧಾನ ಜಾಗೃತಿ ಜಾಥಾ ಸಂಚಾರ

Chikkamagaluru: ಸಂವಿಧಾನ ಜಾಗೃತಿ ಜಾಥಾ ಸಂಚಾರ


ಚಿಕ್ಕಮಗಳೂರು: ಸಂವಿಧಾನ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಕಳೆದ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಂದ ಚಾಲನೆಗೊಂಡ ಸಂವಿಧಾನ ಜಾಗೃತಿ ಜಾಥಾವು ಜಿಲ್ಲೆಯಾದ್ಯಂತ ಪ್ರತಿ ನಿತ್ಯ ಸಂಚಾರ ಕೈಗೊಂಡಿದ್ದು ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಎಲ್ಲೆಡೆ ಸಂವಿಧಾನಕ್ಕೆ ಜೈಕಾರ ಕೇಳಿ ಬರುತ್ತಿದೆ.

ಸಂವಿಧಾನ ಜಾಗೃತಿ ಜಾಥಾ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಕೊಪ್ಪ ತಾಲ್ಲೂಕಿನ ಹರಿಹರಪುರ ನಿಲುವಾಗಿಲು, ಹಾಗೂ ಶಾನುವಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿ, ಸಂವಿಧಾನ ಮೂಲ ಆಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿತು.

ಗ್ರಾಮದ ಮಹಿಳೆಯರು ಪೂರ್ಣಕುಂಭ ಹೊತ್ತು, ಆರತಿ ಬೆಳಗಿ ಸಡಗರ ಸಂಭ್ರಮದಿಂದ ರಥವನ್ನು ಸ್ವಾಗತಿಸಿದರು. ಗ್ರಾಮದ ಮುಖಂಡರು, ಸ್ಥಳೀಯ ಗ್ರಾಮ ಪಂಚಾಯತ್ ಚುನಾಯಿತ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಎಲ್ಲೆಡೆ ಸಂವಿಧಾನ ಹಬ್ಬ ಕಳೆ ಕಟ್ಟಿದೆ.

ಹರಿಹರಪುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹದೇವಯ್ಯ ಮಾತನಾಡಿ, ಸಂವಿಧಾನದ ಆದರ್ಶ, ಮೌಲ್ಯ, ಆಶೋತ್ತರಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಈ ಜಾಥದ ಉದ್ದೇಶವಾಗಿದೆ. ಹಲವಾರು ಧರ್ಮ, ವಿವಿಧ ವೈವಿಧ್ಯತೆಗಳು, ಹಲವಾರು ಜಾತಿಗಳು ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ಸಂವಿಧಾನ ರಚಿಸುವುದು ಅತ್ಯಂತ ಕಠಿಣ ಸಂಗತಿಯಾಗಿದ್ದು, ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವಾರು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ವಿಶ್ವದಲ್ಲೇ ಆದರ್ಶ ಸಂವಿಧಾನವನ್ನು ರಚಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಲವಾರು ಕಲಾ ತಂಡಗಳು ಶಾಲೆಯ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಎಲ್ಲಾ ಬೀದಿ ಬೀದಿಗಳಲ್ಲಿ ರಥವು ಸಂಚರಿಸಿ ಅರಿವು ಮೂಡಿಸುತ್ತಿದೆ. ನಿಲುವಾಗಿಲಿನಲ್ಲಿ ಮಾಜಿ ಸೈನಿಕರಿಂದ ನಡೆದ ಪಥಸಂಚಲನ ಎಲ್ಲರ ಗಮನ ಸೆಳೆಯಿತು.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article