Chikkamagaluru: ವೊಕ್ಕಲಗೆರೆ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ
ಚಿಕ್ಕಮಗಳೂರು: ಸಂವಿಧಾನ ಜಾಗೃತಿ ಜಾಥಾವು ಫೆಬ್ರವರಿ 20 ರಂದು ಕಡೂರು ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದು, ವೊಕ್ಕಲಗೆರೆ, ಹೋಚಿಹಳ್ಳಿ, ಕುಂಕನಾಡು, ಕಡೂರು ಪುರ ಗ್ರಾಮ ಪಂಚಾಯತ್, ಅಣ್ಣೆಗೆರೆ, ಉಳಿಗೆರೆ, ಯಗಟಿ ಹಾಗೂ ಉಡುಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿತು.
ಪ್ರಥಮವಾಗಿ ವೊಕ್ಕಲಗೆರೆ ಗ್ರಾಮ ಪಂಚಾಯತಿಗೆ ಆಗಮಿಸಿದ ಜಾಗೃತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು, ಶಾಲಾ ಮಕ್ಕಳು, ಅಂಗನವಾಡಿ ಸಿಬ್ಬಂದಿಗಳು, ಸ್ವಸಹಾಯ ಸಂಘಗಳು, ಸ್ತೀ ಶಕ್ತಿ ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರು ಸಂಭ್ರಮದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು.
ಶಾಲಾ ಮಕ್ಕಳು, ಛದ್ಮವೇಷಧಾರಿಗಳು, ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ, ಟ್ರ್ಯಾಕ್ಟರ್ ಹಾಗೂ ಬೈಕ್ ರ್ಯಾಲಿ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಭಾರತಾಂಬೆ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಸುಭಾಷ್ಚಂದ್ರ ಭೋಸ್, ಗಾಂಧೀಜಿ ಮುಂತಾದವರ ಸ್ಥಬ್ದಚಿತ್ರಗಳು ಹಾಗೂ ಡ್ರಂಸೆಟ್ ವಾದ್ಯ, ತಮಟೆ ವಾದ್ಯ, ವೀರಗಾಸೆ ಕುಣಿತ, ಡೊಳ್ಳು ವಾದ್ಯದೊಂದಿಗೆ ಹಾಗೂ ಬಲೂನ್ಗಳಿಂದ ಅಲಂಕೃತವಾದ ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಶಿಕ್ಷಕರು ಮತ್ತು ಮಕ್ಕಳು ಸಂವಿಧಾನ ಪೀಠಿಕೆ ಭೋದಿಸಲಾಯಿತು. ಶಾಲಾ ಮಕ್ಕಳು ಕ್ರಾಂತಿಗೀತೆ, ದೇಶಭಕ್ತಿ ಗೀತೆ ಹಾಡಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಂವಿಧಾನದಲ್ಲಿ ಅಡಕವಾಗಿರು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಬಗ್ಗೆ ಹಾಗೂ ಸಮಪಾಲು, ಸಮಬಾಳು, ಸಂವಿಧಾನದ ಕೊಡುಗೆ ಅಧಿಕಾರದ ಅವಕಾಶ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನತೆ ಬಗ್ಗೆ ವಿವರವಾಗಿ ತಿಳಿಸಿದರು.

