Kundapura: ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆ
Friday, February 23, 2024
ಕುಂದಾಪುರ: ಇಲ್ಲಿನ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆಯ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ವಾನ್ ಕೋಟ ಕೆ. ಚಂದ್ರಶೇಖರ್ ಸೋಮಯಾಜಿಯವರ ನೇತೃತ್ವದಲ್ಲಿ ನೆರವೇರಿತು.
ಫೆ.22 ರಂದು ಪುಣ್ಯಾಹ, ಬೆಳಿಗ್ಗೆ 5.20ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ರತ್ನನ್ಯಾಸಪೂರ್ವಕ 'ಶ್ರೀ ಬಗಳಾಂಬ ತಾಯಿಯ ಪುನರ್ ಪ್ರತಿಷ್ಠೆ', ಜೀವ ಕುಂಭಾಭಿಷೇಕ, ಪ್ರಾಣ ಪ್ರತಿಷ್ಠೆ, ಕಲಾಭಿವೃದ್ಧಿ ಹೋಮ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಹಾಗೂ ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ 'ಅನ್ನ ಸಂತರ್ಪಣೆ' ಕಾರ್ಯಕ್ರಮ ನಡೆಯಿತು.
ಸಂಜೆ 5 ಗಂಟೆಗೆ ಪುಣ್ಯಾಹ, ಶಾಂತಿಹೋಮ, ನವೋತ್ತರ ದ್ರವ್ಯಕಲಶಪೂರಿತ ಬ್ರಹ್ಮಕಲಶ ಸ್ಥಾಪನೆ, ಪ್ರದಾನಾಧಿವಾಸ ಹೋಮ ನಡೆಯಿತು.
ರಾತ್ರಿ 8 ಗಂಟೆಗೆ ಶ್ರೀ ನವಿಯಕ್ಷ ಬಳಗ ಕೋಟ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ 'ಚಕ್ರ-ಚಂಡಿಕೆ' ಯಕ್ಷಗಾನ ಪ್ರದರ್ಶನಗೊಂಡಿತು.




