Mangalore: ಗಾಂಜಾ ಸಾಗಾಟ-120 ಕೆ.ಜಿ. ಗಾಂಜಾ ವಶ: ಇಬ್ಬರ ಬಂಧನ
ಮಂಗಳೂರು: ಒರಿಸ್ಸಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಹೇಂದ್ರ ಬೊಲೆರೋ ವಾಹನದಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ 120 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ವಯನಾಡು ಜಿಲ್ಲೆಯ ಚೂರಮಲ ಗ್ರಾಮದ ನಿವಾಸಿ ಅನೂಪ್ ಎಂ.ಎಸ್. (28) ಹಾಗೂ ಕೇರಳದ ಕಣ್ಣೂರು ಜಿಲ್ಲೆಯ ಪಡಿಯೂರು ಗ್ರಾಮದ ಪಡೆಯಂಗೋಡು ನಿವಾಸಿ ಲತೀಪ್ ಕೆ.ವಿ. (36) ಬಂಧಿತ ಆರೋಪಿಗಳು.
ಫೆ.೬ ರಂದು ಮಂಗಳೂರಿಗೆ ಒರಿಸ್ಸಾ ರಾಜ್ಯದಿಂದ ಮಹೇಂದ್ರ ಬೊಲೆರೋ ವಾಹನದಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೆಚ್.ಎಂ. ನೇತೃತ್ವದ ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಪತ್ತೆ ಹಚ್ಚಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಸಿಲ್ವರ್ ಬಣ್ಣದ ಮಹೇಂದ್ರ ಬೊಲೆರೋ ಕಾರು, 28 ಲಕ್ಷ ಮೌಲ್ಯದ 120 ಕೆ.ಜಿ. ಗಾಂಜಾ, ೩ ಮೊಬೈಲ್ ಫೋನ್ಗಳನ್ನು, 4020 ರೂ. ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಒಟ್ಟು ಮೊತ್ತ 35,14,520 ರೂ. ಎಂದು ಅಂದಾಜಿಸಲಾಗಿದೆ.
ಗಾಂಜಾವನ್ನು ಕಳ್ಳ ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ಬೋಲೆರೋ ವಾಹನದ ಹಿಂಬದಿಯ ಡಿಕ್ಕಿಯಲ್ಲಿ ಪ್ರತ್ಯೇಕವಾದ ಒಂದು ಕಬ್ಬಿಣದ ಬಾಕ್ಸ್ನ್ನು ಮಾಡಿಕೊಂಡು ಈ ಬಾಕ್ಸ್ನಲ್ಲಿ ಗಾಂಜಾವನ್ನು ಬಚ್ಚಿಟ್ಟಿದ್ದರು. ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಡುಕೊಂಡಿದ್ದಾರೆ.
ಆರೋಪಿ ಅನೂಪ್ ವಿರುದ್ಧ ಈ ಹಿಂದೆ ಮೈಸೂರು ಜಿಲ್ಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 20018ನೇ ಇಸವಿಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿದೆ. ಅಲ್ಲದೇ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮೆಪ್ಪಳ್ಳಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ, ವಯನಾಡು ಜಿಲ್ಲೆ ಕಲ್ಪಟ್ಟ ಪೊಲೀಸ್ ಠಾಣೆಯಲ್ಲಿ 2 ದರೋಡೆ ಪ್ರಕರಣ, ಒಂದು ಹಲ್ಲೆ ಪ್ರಕರಣ, ವಯನಾಡು ಜಿಲ್ಲೆಯ ಅಂಬಲವಯಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣಗಳು ದಾಖಲಾಗಿವೆ.
ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್ಐ ರಾಜೇಂದ್ರ ಬಿ, ನರೇಂದ್ರ, ಸುದೀಪ್, ಶರಣಪ್ಪ ಭಂಡಾರಿ ಹಾಗೂ ಎಎಸ್ಐ ಮೋಹನ್ ಕೆ.ವಿ., ಶೀನಪ್ಪ ಮತ್ತು ಸಿಸಿಬಿ ಸಿಬ್ಬಂದಿಯವರು ಭಾಗವಹಿಸಿದ್ದರು.



