Mangalore: ಬಿಜೆಪಿ ಸರ್ಕಾರದಲ್ಲಿ ಇದ್ದಾಗ ಯಾಕೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಿಲ್ಲ
ಮಂಗಳೂರು: ಕಳೆದ ಬಾರಿ ಹಾಗೂ ಅದಕ್ಕೂ ಮೊದಲು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಯಾಕೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಿಲ್ಲ. ಕಳೆದ ವರ್ಷ ದ.ಕ. ಉಡುಪಿ ಜಿಲ್ಲೆಯ 500 ಸರ್ಕಾರಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಯಾಕೆ ಪ್ರವೇಶ ಪಡೆಯಲಿಲ್ಲ ಎಂದು ಆಮ್ ಆದ್ಮಿ ಪಾರ್ಟಿಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ನವೀನ್ ಚಂದ್ರ ಪೂಜಾರಿ ಪ್ರಶ್ನಿಸಿದರು.
ಅವರು ಫೆ.14 ರಂದು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ’ಅಲ್ಪಸಂಖ್ಯಾತರ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಶಾಸಕರುಗಳಾದ ಡಾ. ವೈ. ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಅವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಸರಿಯಾದ ರೀತಿಯಲ್ಲಿ ರಾಜಕೀಯ ಮಾಡದ ಬಿಜೆಪಿಗರು ಚುನಾವಣೆ ಸಮೀಪಿಸುತ್ತಿದ್ದಂತೆ ರಸ್ತೆಯಲ್ಲಿ ರಾಜಕೀಯ ಮಾಡುತ್ತಾರೆ ಎಂದ ಅವರು ರಸ್ತೆಯಲ್ಲಿ ದಾದಾಗಿರಿ, ನೈತಿಕ ಪೊಲೀಸ್ ಗಿರಿ ಮಾಡುವ ಈ ಇಬ್ಬರು ಶಾಸಕರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಕ್ಷಕಿ ಧಾರ್ಮಿಕ ನಿಂದನೆ ಮಾಡಿರುವುದು ಅದು ಅಕ್ಷಮ್ಯ ಅದನ್ನು ಖಂಡಿಸುತ್ತದೆ. ಘಟನೆ ನಡೆದು 2-3 ದಿನ ಕಳೆದರೂ ಸರ್ಕಾರ ಏನು ಮಾಡಿಲ್ಲ. ಇದನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಕೋಮು ಸೌಹಾರ್ದವನ್ನು ಉಂಡುಮಾಡುತ್ತಾರೆ. ಇನ್ನು ಚುನಾವಣೆಗೆ ಕೇವಲ 2 ತಿಂಗಳು ಬಾಕಿ ಇದ್ದು, ಬಿಜೆಪಿಗರಿಗೆ 2 ಹೆಣ ಬೀಳದಿದ್ದರೆ ಚುನಾವಣೆ ನಡೆಸಲು ಆಗುವುದಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ನಳೀನ್ ಕುಮಾರ್ ಅಠಾವೋ ಅಭಿಯಾನ ಪ್ರಾರಂಭವಾಗಿದ್ದು, ಇವರಿಗೆ ಅಭಿವೃದ್ಧಿಯಲ್ಲಿ ಮತ ಕೇಳಲು ಆಗುವುದಿಲ್ಲ. ಆದುದರಿಂದ ಧಾರ್ಮಿಕ ವಿಚಾರದಲ್ಲಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಲೆಯನ್ನು ಬಿಡಲು ಹೇಳುವ ಶಾಸಕ ಭರತ್ ಶೆಟ್ಟಿ ಅವರು ಅವರ ಕ್ಷೇತ್ರದಲ್ಲಿ ಎಷ್ಟು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅಲ್ಲಿಯ ಶಾಲೆಗಳ ಸ್ಥಿತಿಯನ್ನು ಒಮ್ಮೆ ಶಾಸಕರು ನೋಡಲಿ ಎಂದು ಎಚ್ಚರಿಸಿದರು.
ಪ್ರಮುಖರಾದ ವಿವೇಕನಂದ ನ್ಯಾಲೀನ್, ಸೆನಾನ್ ಪಿಂಟೋ, ವಾಸುದೇವ, ಶಿಮಾ ಮಡಿವಾಳ ಇದ್ದರು.