Mangalore: ಕರ್ಣಾಟಕ ಬ್ಯಾಂಕ್ ರಾಷ್ಟ್ರದ ಗಮನ ಸೆಳೆದ ಬ್ಯಾಂಕ್
ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆ
ಮಂಗಳೂರು: ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ ಶತಮಾನೋತ್ಸವ ಸಂಭ್ರಮಾಚರಣೆ ಸಮಾರಂಭ ನಗರದ ಟಿಎಂಎ ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಭಾನುವಾರ ಸಂಜೆ ನೆರವೇರಿತು.
ಮುಖ್ಯ ಅತಿಥಿಯಾಗಿದ್ದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಮುಂಚೂಣಿಯ ಬ್ಯಾಂಕ್‌ಗಳಲ್ಲೊಂದಾದ ಕರ್ಣಾಟಕ ಬ್ಯಾಂಕ್ ರಾಷ್ಟ್ರದ ಗಮನ ಸೆಳೆದ ಬ್ಯಾಂಕ್ ಆಗಿದೆ. ಕರಾವಳಿ ಮಣ್ಣಿನಲ್ಲಿ ಹುಟ್ಟು ಪಡೆದ ಈ ಬ್ಯಾಂಕ್ ಶತಮಾನೋತ್ಸವ ಸಂಭ್ರಮದಲ್ಲಿರುವುದು ಹೆಮ್ಮೆಯ ವಿಷಯ. ಈ ಬ್ಯಾಂಕ್‌ನಿಂದಾಗಿ ಕರ್ನಾಟದ ಗೌರವವೂ ಹೆಚ್ಚಾಗಿದೆ ಎಂದರು.
ಕರಾವಳಿಯ ಅಸ್ಮಿತೆಯಾಗಿದ್ದ ಅನೇಕ ಬ್ಯಾಂಕ್‌ಗಳು ಇಂದು ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡಿವೆ. ಆದರೆ ಕರ್ಣಾಟಕ ಬ್ಯಾಂಕ್ ಯಾವ ಬ್ಯಾಂಕ್‌ನೊಂದಿಗೂ ವಿಲೀನ ಆಗಬಾರದು. ಕರ್ಣಾಟಕ ಬ್ಯಾಂಕ್‌ನೊಂದಿಗೆ ಕರ್ನಾಟಕ ಸರ್ಕಾರ ಇರಲಿದೆ ಎಂದರು.
ಕರ್ಣಾಟಕ ಬ್ಯಾಂಕ್ ಸಾರ್ವಜನಿಕರ ಮತ್ತು ಕೃಷಿಕರ ಬದುಕಿಗೆ ಆಧಾರವಾಗಿದೆ. ಈ ಬ್ಯಾಂಕ್‌ನಿಂದಾಗಿ ಸಾಕಷ್ಟು ಮಂದಿ ಸಾಲ ಸೌಲಭ್ಯ ಪಡೆದು ತಮ್ಮ ಬದುಕು ರೂಪಿಸಿಕೊಂಡಿದ್ದು, ಉತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೆಸರು ಅಜರಾಮರವಾಗಿ ಉಳಿಯಬೇಕು. ಹಣ ಚಲಾವಣೆಯಲ್ಲಿದ್ದಾಗ ಮಾತ್ರ ಸಮಾಜದ ಅಭಿವೃದ್ಧಿಯೂ ಸಾಧ್ಯ. ಗ್ರಾಹಕರು ಶಕ್ತಿಯುತರಾದಾಗ ಬ್ಯಾಂಕ್ ಕೂಡ ಬಲಿಷ್ಠವಾಗಲು ಸಾಧ್ಯ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ, ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಕರ್ಣಾಟಕ ಬ್ಯಾಂಕ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಬ್ಯಾಂಕ್‌ನಿಂದ ದೇಶಕ್ಕೆ ಇನ್ನಷ್ಟು ಕೊಡುಗೆ ಸಿಗುವಂತಾಗಲಿ ಎಂದರಲ್ಲದೆ ಬ್ಯಾಂಕಿಂಗ್ ಕುರಿತಂತೆ ಸಂಶೋಧನಾ ಸಂಸ್ಥೆಯನ್ನು ತೆರೆಯುವ ಮಹತ್ವವನ್ನು ತಿಳಿಸಿದರು.
100 ರೂ. ನಾಣ್ಯ ಬಿಡುಗಡೆ...
ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ 100 ರೂ. ನಾಣ್ಯವನ್ನು ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಿದರು. ಇಂಡಿಯಾ ಪೋಸ್ಟ್ ವತಿಯಿಂದ ನೂತನ ಪೋಸ್ಟಲ್ ಸ್ಟ್ಯಾಂಪ್ ಮತ್ತು ಲಕೋಟೆಯನ್ನು ಆರ್. ವೆಂಕಟರಮಣಿ ಮತ್ತು ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಇದೇ ಸಂದರ್ಭ 100 ವರ್ಷ ಸಾಧನೆಯ ಸ್ಮರಣೆ ಸಂಚಿಕೆ ಬಿಡುಗಡೆಗೊಂಡಿತು.
15 ನೂತನ ಶಾಖೆ..
ಶತಮಾನೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಣಾಟಕ ಬ್ಯಾಂಕಿನ ಒಟ್ಟು 15 ಹೊಸ ಶಾಖೆಗಳು ಉದ್ಘಾಟನೆಗೊಂಡಿತು.
ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಬ್ಯಾಂಕ್ ಸಾಧನೆಯನ್ನು ತೆರೆದಿಟ್ಟರು.
ಕರ್ಣಾಟಕ ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್. ಸ್ವಾಗತಿಸಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ವಂದಿಸಿದರು. ಚೈತ್ರಾ ವಾಸುದೇವನ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಗಾಯಕರಾದ ಶಂಕರ್ ಮಹದೇವನ್, ವಿಜಯ ಪ್ರಕಾಶ್‌ರಿಂದ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿತು.

