Moodubidire: ಕರಾವಳಿ ಕೇಸರಿ ವತಿಯಿಂದ ನಾಲ್ಕನೇ ವರ್ಷದ ಶನೀಶ್ವರ ಪೂಜೆ: ಧಾರ್ಮಿಕ ಸಭೆ
ಮೂಡುಬಿದಿರೆ: ದೇಶವನ್ನು ಹಲವು ಸಾವಿರ ವರ್ಷಗಳಿಂದ ಸಾಧು ಸಂತರು ಧಾರ್ಮಿಕ ಚಿಂತನೆಯ ಮೂಲಕ ಕಟ್ಟಿ ಬೆಳೆಸಿದ್ದಾರೆ. ಇಲ್ಲಿಯ ಧಾರ್ಮಿಕ ಸಾಂಸ್ಕೃತಿಕ ಚಿಂತನೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಅವರು ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ, ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ 12 ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ನಡೆದ 4ನೇ ವರ್ಷದ ಶನೀಶ್ವರ ಪೂಜೆಯ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಿಶ್ವದಲ್ಲಿ ಅತೀ ಹೆಚ್ಚು ಅಂದರೆ 142ಕೋಟಿ ಜನಸಂಖ್ಯೆ ಹೊಂದಿರುವ ದೇಶ ನಮ್ಮದು. ಅದರಲ್ಲಿ 40 ವರ್ಷದೊಳಗಿನ ಸುಮಾರು 80 ಕೋಟಿ ಯುವಶಕ್ತಿ ನಮ್ಮಲ್ಲಿದೆ. ಈ ಯುವ ಸಂಪತ್ತು ಸಂಪೂರ್ಣವಾಗಿ ದೇಶದ ಸಂಪತ್ತಾಗಿ ಪರಿವರ್ತನೆಯಾದಲ್ಲಿ ವಿಶ್ವದಲ್ಲಿ ಮುಂಚೂಣಿಯ ರಾಷ್ಟ್ರವಾಗಿ ಭಾರತ ನಿಲ್ಲುವಲ್ಲಿ ಸಂಶಯವಿಲ್ಲ. ಈ ನಡುವೆ ಸಂಪತ್ತಿನ ಅಂತರ ವಿದ್ಯಾವಂತರು, ಅವಿದ್ಯಾವಂತರು ಎಂಬ ಅಂತರ ಸೇರಿದಂತೆ ಜಾತಿ, ಭಾಷೆಗಳ ನಡುವೆ ಕಂಡು ಬರುವ ಅಂತರ ನಿವಾರಣೆಯಾಗಬೇಕಾಗಿದೆ ಎಂದು ಅವರು ಹೇಳಿದರು.
ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡುವುದಲ್ಲದೆ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ, ಸಾಂಸ್ಕೃತಿಕ ಸೋಲು ಕಾಣದಂತೆ ಎಚ್ಚರ ವಹಿಸ ಬೇಕಾಗಿದೆ ಅವರು ತಿಳಿಸಿದರು.
ಕರಾವಳಿ ಕೇಸರಿಯ ವತಿಯಿಂದ ನೀಡಲಾಗುವ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಡಾ. ಎಂ. ಮೋಹನ್ ಆಳ್ವ, ಉದ್ಯಮ ರತ್ನ ಪ್ರಶಸ್ತಿಯನ್ನು ಉದ್ಯಮಿ ರಂಜಿತ್ ಪೂಜಾರಿ ತೋಡಾರು ಅವರಿಗೆ ಶಾಲು, ಫಲಪುಷ್ಪ,ಸನ್ಮಾನ ಪತ್ರ, ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ರಾಷ್ಟ್ರ ಮಟ್ಟದ ಕರಾಟೆ ಪಟು ಮಾ| ಆರ್ಯನ್ ಶೆಟ್ಟಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಉಪನ್ಯಾಸಕ ಆದರ್ಶ್ ಗೋಖಲೆ ದಿಕ್ಸೂಚಿ ಭಾಷಣ ನಡೆಸಿದರು.
ದರೆಗುಡ್ಡೆ ಶಾಲಾ ಅತಿಥಿ ಶಿಕ್ಷಕರೋರ್ವರಿಗೆ ಸಹಾಯಧನ, ಅನಾರೋಗ್ಯ ಪೀಡಿತ ಮತ್ತು ಅಶಕ್ತರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ನ್ಯಾಯವಾದಿ ಶರತ್ ಶೆಟ್ಟಿ, ಉದ್ಯಮಿಗಳಾದ ಸತ್ಯಪ್ರಕಾಶ್ ಹೆಗ್ಡೆ, ಸುರೇಂದ್ರ ಪೂಜಾರಿ ಕಂದಿರು, ಜಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕರಾವಳಿ ಕೇಸರಿಯ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಅಧ್ಯಕ್ಷ ಸದಾನಂದ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಚಿದಾನಂದ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.
ಸ್ಥಾಪಕಾಧ್ಯಕ್ಷ ಸಮಿತ್ರಾಜ್ ದರೆಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಅಳದಂಗಡಿಯಲ್ಲಿ ಅಸಹಾಯಕ ಕುಟುಂಬಕ್ಕೆ ಮನೆ ನಿರ್ಮಿಸುವ ಮೂಲಕ ಪ್ರಾರಂಭಗೊಂಡ ಟ್ರಸ್ಟ್ ಸಹಾಯಧನ, ಕೊರೊನಾ ಕಿಟ್ ವಿತರಣೆ ಸೇರಿದಂತೆ ಸಾವಿರಾರು ಜನರ ಕಣ್ಣೊರೆಸುವ ಕಾಯಕದಲ್ಲಿ ನಿರತವಾಗಿದೆ ಎಂದರು.
ರಾಮ್ಕುಮಾರ್ ಮಾರ್ನಾಡ್, ಗಣೇಶ್ ಬಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.
ದರೆಗುಡ್ಡೆ ವೇ.ಮೂ. ನಾಗರಾಜ ಭಟ್ ನೇತೃತ್ವದಲ್ಲಿ ಶನೀಶ್ವರ ಪೂಜೆ ನಡೆಯಿತು. ನಂತರ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಕಲಾವಿದರಿಂದ ನೃತ್ಯ ಸಿಂಚನ, ಸಪ್ತಸ್ವರ ಮೆಲೋಡಿಸ್ ವಾಮದಪದವು ಮತ್ತು ಕಟೀಲೇಶ್ವರೀ ಮೆಲೋಡಿಸ್ ಕೆಲ್ಲಪುತ್ತಿಗೆ ಇವರಿಂದ ಸಂಗೀತ ರಸಮಂಜರಿ ಹಾಗೂ ಮೋಕೆದ ಕಲಾವಿದೆರ್ ಜಾರ್ಕಳ ಮುಂಡ್ಲಿ ಇವರ ಸಾಮಾಜಿಕ ಹಾಸ್ಯಮಯ ನಾಟಕ ಅಜ್ಜಿಗ್ ರಲಾ ಇಜ್ಜಿ ಪ್ರದರ್ಶನಗೊಂಡಿತು.

