Mangalore: ಪ್ರತಿಯೊಂದು ಮನೆಗೆ ಗೇರು ಗಿಡ: ಮಮತಾ ಗಟ್ಟಿ
ಮಂಗಳೂರು: ಗೇರು ಕೃಷಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಪ್ರತಿಯೊಂದು ಮನೆಗೂ ಒಂದು ಗೇರು ಗಿಡವನ್ನು ವಿತರಿಸಲಾಗುವುದು ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ಅವರು ಮಾ.11 ರಂದು ತಮ್ಮ ನೂತನ ಕಚೇರಿಯನ್ನು ಉದ್ಘಾಟಿಸಿ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿನ ದಿನದಲ್ಲಿ ಪ್ರತಿಯೊಂದು ಮನೆಯ ಮುಂದೆಯೂ ಒಂದೊಂದು ಗೇರು ಮರ ಇರುತ್ತಿತ್ತು. ಆದರೆ ಇತ್ತೀಚಿನ ದಿನದಲ್ಲಿ ಯಾವ ಮನೆಯ ಎದುರಲ್ಲೂ ಗೇರು ಮರ ನೋಡಲು ಸಿಗುವುದಿಲ್ಲ. ಆದುದರಿಂದ ಮತ್ತೆ ಮನೆ ಮನೆಗೆ ಗೇರು ಗಿಡವನ್ನು ವಿತರಿಸಲಾಗುವುದು ಎಂದ ಅವರು ಒಂದು ಗೇರು ಗಣ್ಣು ತಿನ್ನುವುದರಿಂದ ಅದರಲ್ಲಿ ವಿಟಮಿನ್ ‘ಸಿ’ ಅಂಶ ಹೆಚ್ಚಾಗಿದ್ದು, ಮಕ್ಕಳ ಆರೋಗ್ಯ ವೃದ್ಧಿಸುವುದು ಎಂದರು.
ಮೊದಲಿಗೆ ವಿದೇಶದಿಂದ ಗೇರು ಕೃಷಿ ಬಂದದ್ದಾದರೂ ನಂತರದ ದಿನಗಳಲ್ಲಿ ನಮ್ಮಲ್ಲಿ ಗೇರು ಕೃಷಿ ಉತ್ತಮ ರೀತಿಯಲ್ಲಿ ಬೆಳೆದಿದ್ದು, ಈಗ ರಾಜ್ಯದಲ್ಲಿ 53 ಸಾವಿರ ಟನ್ ಗೇರು ಬೀಜ ಉತ್ಪನ್ನವಾಗುತ್ತಿದ್ದು, ಕರಾವಳಿಯಲ್ಲಿ 660 ಟನ್ ಗೇರು ಬೀಜ ಉತ್ಪತ್ತಿಯಾಗುತ್ತಿದೆ ಎಂದು ಹೇಳಿದರು.
ಕರಾವಳಿಯಲ್ಲಿ 9 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಗೇರು ಕೃಷಿ ನಡೆಯುತ್ತಿದ್ದು, ದೇಶದಲ್ಲಿ 5ನೇ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಉತ್ಪನ್ನದಲ್ಲಿ 6ನೇ ಸ್ಥಾನದಲ್ಲಿದೆ. ಕಳೆದ ವರ್ಷ ಕರಾವಳಿಯಲ್ಲಿ 414 ಲಕ್ಷ ಗೇರು ಬೀಜದಿಂದ ಆದಾಯ ಬಂದಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಚಿವರೊಂದಿಗೆ ಹಾಗೂ ವಿಧಾನಸಭಾ ಸ್ಪೀಕರ್ ಅವರೊಂದಿಗೆ ಮಾತನಾಡಿದ್ದು, ಅನುದಾನ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಕೃಷಿಯ ಅಭಿವೃದ್ಧಿಗೆ ಅರಣ್ಯ ಸಚಿವರಲ್ಲಿ ನರ್ಸರಿ ಸ್ಥಾಪನೆಗಾಗಿ 50 ಕೋಟಿ ಅನುದಾನವನ್ನು ನೀಡಿದ್ದು, ಇದರಿಂದ ಹೊಸ ಗಿಡಗಳನ್ನು ನೆಡಲಾಗುವುದು. ಈಗ ಎನ್‌ಹೆಚ್‌ಎಂ, ಆರ್‌ಕೆವಿಐ, ಡಿಸಿಡಿಇ ಇಂದ ಮಾತ್ರ ಅನುದಾನ ಬರುತ್ತಿದ್ದು, ಇದು ನಿರ್ವಹಣೆಗೆ ಸರಿಓಗುತ್ತಿದೆ. ಆದುದರಿಂದ ಕೃಷಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುವುದು, ನಂತರದ ದಿನಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಸಚಿವರ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲ, ಪ್ರಶಂತ್ ಕಜಾ, ಚಂದ್ರಹಾಸ್ ಕರ್ಕೆರಾ, ಅಪ್ಪಿ, ಶಶಿರೇಖ, ಕಲಾ ಮತ್ತಿತರರು ಉಪಸ್ಥಿತರಿದ್ದರು.

