Mangalore: ಸಮಯದ ಸದುಪಯೋಗ ಹಾಗೂ ಸ್ವಯಂಶಿಸ್ತು ನಮ್ಮನ್ನು ಗುರಿಯತ್ತ ಕೊಂಡೊಯ್ಯುತ್ತದೆ: ಪ್ರೊ. ನರೇಂದ್ರ ಎಲ್ ನಾಯಕ್
ಮಂಗಳೂರು: ವಿದ್ಯಾರ್ಥಿಗಳು ಜೀವನದಲ್ಲಿ ಒಂದು ನಿಖರವಾದ ಗುರಿಯನ್ನು ಹೊಂದಿರಬೇಕು ಆ ಗುರಿ ಸಾಧಿಸುವಲ್ಲಿ ನಿರಂತರ ಪ್ರಯತ್ನ ಹಾಗೂ ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸರಿಯಾದ ಯೋಜನೆ, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಹಾಗೂ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ತಲುಪಲು ಸಾಧ್ಯ ಎಂದು ಎಕ್ಸ್‌ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್ ನಾಯಕ್ ಹೇಳಿದರು.
ಅವರು ಮಂಗಳೂರಿನ ಭಗವತಿ ಕ್ಷೇತ್ರದ ಕೂಟಕ್ಕಳ ಸಭಾಂಗಣದಲ್ಲಿ ನಡೆದ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಆಯೋಜಿಸಿದ ಓರಿಯಂಟೇಶನ್-೨೦೨೪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ವಯಂ ಶಿಸ್ತುಬದ್ಧರಾಗಿ ತಮ್ಮ ಜವಾಬ್ದಾರಿಯನ್ನರಿತು ಸಮಯವ್ಯರ್ಥ ಮಾಡದೇ ಗಂಭೀರವಾಗಿ ಅಧ್ಯಯನ ಮಾಡಬೇಕು. ಕಾಲೇಜಿನಲ್ಲಿ ಕೆಲವೊಂದು ನಿಯಮ ನಿಬಂಧನೆಗಳು ಇದ್ದು ಅದನ್ನು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಮುರಿಯಬಾರದು. ವಿದ್ಯಾರ್ಥಿಗಳು ತಮಗೆ ಸಿಗುವ ಪ್ರತಿಯೊಂದು ಸಣ್ಣ ಅವಕಾಶಗಳನ್ನು ಕೂಡ ವ್ಯರ್ಥಮಾಡಿಕೊಳ್ಳಬಾರದು. ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆಯು ತಮ್ಮ ಜೀವನದ ಅಪೂರ್ಣತೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಹಾಗೂ ವೃತ್ತಿಜೀವನದ ಮುಂದಿನ ಸವಾಲುಗಳನ್ನು ಎದುರಿಸುವಲ್ಲಿ ಮಾನಸಿಕವಾಗಿ ಸಿದ್ದರಾಗಬೇಕು. ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು ಹಾಗೂ ಹೊಸ ಶೈಕ್ಷಣಿಕ ವಾತಾವರಣವನ್ನು ಸಕಾರಾತ್ಮಕ ಮನಸ್ಸಿನೊಂದಿಗೆ ಪ್ರಾರಂಭಿಸಿ ಎಂದು ಶುಭ ಹಾರೈಸಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಅಂಕುಶ್. ಎನ್. ನಾಯಕ್ ಅವರು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕನಿಷ್ಟ ಹಂತದ ತಂತ್ರಜ್ಞಾನದ ಬಳಕೆಯ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ಹಂತದಲ್ಲಿ ತಂತ್ರಜ್ಞಾನದ ಸರಿಯಾದ ಬಳಕೆ ಮಾಡುವುದರ ಕುರಿತು ವಿವರಿಸಿದ ಅವರು ಪೋಷಕರು ವಿದ್ಯಾರ್ಥಿಗಳ ಮುಂದಿನ ಗುರಿತಲುಪುವ ಯೋಜನೆಯಲ್ಲಿ ಸಂಪೂರ್ಣ ಜವಾಬ್ದಾರಿ ಹೊಂದಿದ್ದು ತಮ್ಮ ಮಕ್ಕಳಿಗಾಗಿ ಮೊಬೈಲ್, ದೂರದರ್ಶನ ಮೊದಲಾದವುಗಳ ಬಳಕೆ ಕಡಿಮೆ ಮಾಡಿ ಉತ್ತಮ ಆದರ್ಶ ವ್ಯಕ್ತಿಗಳಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಎ.ಐ.ಸಿ.ಇ. ವಿಭಾಗದ ಸಂಯೋಜಕರಾದ ಪ್ರೊ. ಶ್ಯಾಮ್ ಪ್ರಸಾದ್ ಎಸ್. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಕುರಿತು, ಕಾಲೇಜಿನ ವಿವಿಧ ಕೋರ್ಸ್‌ನ ಕುರಿತು, ಆ ಕೋರ್ಸ್‌ನ ಮುಂದಿನ ಅವಕಾಶ ಮತ್ತು ಸಾಧ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಇಲ್ಲಿ ಕಳೆಯುವ ಪ್ರತಿಕ್ಷಣ ಕೂಡ ತುಂಬಾ ಮುಖ್ಯವಾದದ್ದಾಗಿದ್ದು ಆ ಸಮಯವನ್ನು ಗಂಭೀರವಾಗಿ ನೋಡಬೇಕು ಎಂದರು.
ಕಾಲೇಜಿನ ಶೈಕ್ಷಣಿಕ ಸಮಿತಿಯ ಸದಸ್ಯ ಬಿ. ವಿನಯ್ ಕುಮಾರ್ ಇವರು ಶೈಕ್ಷಣಿಕ ಸಾಲಿನ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಪದವಿ ಪೂರ್ವ ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಆರಂಭವಾಗಿದ್ದು, ವಿದ್ಯಾರ್ಥಿಗಳ ನಿರಂತರವಾದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಕ್ಕೇ ಸಿಗುತ್ತದೆ ಎಂದು ನುಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಅವರು ಪದವಿಪೂರ್ವ ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ತರ ಘಟ್ಟವಾಗಿದ್ದು ಈ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹಾಗೂ ಪೋಷಕರು ಕಡ್ಡಾಯವಾಗಿ ಅನುಸರಿಸಬೇಕಾದ ಕೆಲವೊಂದು ನಿಬಂಧನೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕಿ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ರಾಧಿಕಾ ಭಟ್ ಹಾಗೂ ಇತರ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಅನುಷಾ ಕೆ. ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಪ್ರಶಾಂತ್ ಪೈ ಅವರು ವಂದಿಸಿದರು.



