ಬಿ.ಸಿ. ರೋಡಿನಲ್ಲಿ ಎರಡು ಬೈಕ್ ಕಳವು
ಬಂಟ್ವಾಳ: ಬಿ.ಸಿ. ರೋಡಿನಲ್ಲಿ ದ್ವಿಚಕ್ರ ವಾಹನ ಚೋರರು ಮತ್ತೆ ತಮ್ಮ ಕೈಚಳಕ ತೋರಿದ್ದಾರೆ ಎರಡು ದಿನಗಳಲ್ಲಿ ತಲಾ ಒಂದರಂತೆ ಎರಡು ದ್ವಿಚಕ್ರ ವಾಹನ ಕಳವಾದ ಘಟನೆ ನಡೆದಿದೆ.
ಸೆ.22 ರಂದು ರಾತ್ರಿ 7 ಗಂಟೆಗೆ ಬಿ.ಸಿ ರೋಡ್‌ನ ಪ್ಯಾನ್ಸಿ ಅಂಗಡಿ ಎದುರುಗಡೆ ಪರ್ಲಿಯಾ ನಿವಾಸಿ ಹಫೀಜ್ ಎ.ಕೆ. ಎಂಬವರು ದ್ವಿಚಕ್ರ ವಾಹನ ನಿಲ್ಲಿಸಿ ಜೆರಾಕ್ಸ್ ಅಂಗಡಿಗೆ ಹೋಗಿ ಬಂದಾಗ ಕಾಣೆಯಾಗಿದೆ.
ಅದೇ ರೀತಿ ಸೆ.23 ರಂದು ಅರಳ ಗ್ರಾಮದ ಮೇಗಿನ ಬಾರ್ಲ ನಿವಾಸಿ ಚೇತನ್ ಕುಮಾರ್ ಬಿ.ಸಿ. ರೋಡ್‌ನ ಪ್ಲೈಓವರ್ ಅಡಿಯಲ್ಲಿ ಬೈಕ್ ನಿಲ್ಲಿಸಿ ಅಲ್ಲಿಯೇ ಮಲ್ಟಿ ಜಿಮ್‌ಗೆ ಹೋಗಿ ವಾಪಾಸ್ ಬರುವಷ್ಟರಲ್ಲಿ ಬೈಕ್ ಕಾಣೆಯಾಗಿದೆ. ಈ ಎರಡು ಬೈಕ್ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ. ರೋಡಿನ ಪ್ಲೈಓವರ್ ಅಡಿಯಲ್ಲಿ ಪ್ರತಿನಿತ್ಯ ಐನೂರಕ್ಕು ಅಧಿಕ ಬೈಕ್‌ಗಳು ನಿಲುಗಡೆಯಾಗುತ್ತದೆ. ಮಂಗಳೂರು ಸಹಿತ ವಿವಿದೆಢೆಗೆ ಕೆಲಸಕ್ಕೆ ಹೋಗುವವರು ಬೆಳಗ್ಗೆ ಬೈಕ್ ನಿಲ್ಲಿಸಿ ತೆರಳುತ್ತಿದ್ದು, ಸಂಜೆ ಬಂದಾಗ ಕೆಲವರ ಬೈಕ್ ಕಾಣೆಯಾಗಿರುತ್ತದೆ. ವಿಚಿತ್ರವೆಂದರೆ ಬೈಕ್ ನಿಲ್ಲಿಸಿ ಯಾವುದೋ ಕಚೇರಿ ಅಥವಾ ಅಂಗಡಿಗೋ ಹೋಗಿ ಬರುವಷ್ಟರಲ್ಲಿ ಬೈಕ್ ಕಾಣೆಯಾಗಿರುವ ಉದಾಹರಣೆಯು ಇದೆ.
ಇಲ್ಲಿಂದ ಕಳವಾದ ಬೈಕ್ ಪತ್ತೆಯಾಗದಿರುವುದೇ ಹೆಚ್ಚು, ಇಲ್ಲಿ ಬೈಕ್ ನಿಲ್ಲಿಸಿದರೆ ಸೂಕ್ತ ಭದ್ರತೆಯು ಇಲ್ಲದಿದ್ದು, ಹಿಕ್ಮತ್ ನಡೆಸಿ ಬೈಕ್ ಕದಿಯುವವರು ಯಾರೆಂಬುದನ್ನೇ ಪ್ಲೈಓವರ್‌ನ ಮೂಗಿನ ನೇರ ಇರುವ ಬಂಟ್ವಾಳ ನಗರ ಪೊಲೀಸರಿಗೆ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮುಖ್ಯವಾಗಿ ಇಲ್ಲಿ ಸಿ.ಸಿ. ಕ್ಯಾಮರಾ ಇಲ್ಲದಿದ್ದು, ದ್ವಿಚಕ್ರ ಚೋರರ ಪತ್ತೆಗೆ ಸಾಧ್ಯವಾಗುತ್ತಿಲ್ಲ, ಪುರಸಭೆ ಪ್ಲೈಓವರ್ ಕೆಳಭಾಗದಲ್ಲಿ ಪೇಯ್ಡ್ ಪಾರ್ಕಿಂಗ್ ಮಾಡಿದರೆ ಬೈಕ್ ಉಳಿಯಬಹುದು, ಪುರಸಭೆಗೂ ಆದಾಯ ಬರಬಹುದು ಆದರೆ ಈ ಬಗ್ಗೆ ಪುರಸಭೆ ಮಮಸ್ಸು ಮಾಡಬೇಕಷ್ಟೆ ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಮನ್ವಯ ಸಾಧಿಸಿ ಈ ಕ್ರಮಕ್ಕೆ ಮುಂದಾಗಬೇಕು ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.