ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ-2024ರ ಸಾಹಸಿಕ ಪ್ರವಾಸಿ ತಾಣ ಪ್ರಶಸ್ತಿ ಪ್ರದಾನ

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ-2024ರ ಸಾಹಸಿಕ ಪ್ರವಾಸಿ ತಾಣ ಪ್ರಶಸ್ತಿ ಪ್ರದಾನ


ಬೆಳ್ತಂಗಡಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಏರ್ಪಡಿಸಿದ್ದ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ-2024ರ ಸಾಹಸಿಕ ಪ್ರವಾಸಿ ತಾಣ (ಅಡ್ವೆಂಚರ್ ಟೂರಿಸಂ) ವಿಭಾಗದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮಕ್ಕೆ ಶುಕ್ರವಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನವದೆಹಲಿಯ ವಿಗ್ಯಾನ್ ಭವನದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು. ಕುತ್ಲೂರು ಗ್ರಾಮದ ಪರವಾಗಿ ಹರೀಶ್ ಡಾಕಯ್ಯ ಪೂಜಾರಿ, ಶಿವರಾಜ್ ಅಂಚನ್ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆ ಎಂಟು ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಹೊಂದುತ್ತಿರುವ ಗ್ರಾಮಗಳನ್ನು ಗುರುತಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಬೆಸ್ಟ್ ಟೂರಿಸಂ ವಿಲೇಜ್ ಕಾಂಪಿಟೇಶನ್ -2024 ಅನ್ನು ಏರ್ಪಡಿಸಲಾಗಿತ್ತು. ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಹರೀಶ್ ಡಾಕಯ್ಯ ಪೂಜಾರಿ, ಕತಾರ್ ಉದ್ಯೋಗಿ ಸಂದೀಪ್ ಕುತ್ಲೂರು ಮತ್ತು ಶಿವರಾಜ್ ಅಂಚನ್ ಅವರು ತಮ್ಮ ಗ್ರಾಮದ ಪ್ರವಾಸಿ ತಾಣಗಳು, ಪರಿಸರ ಹಾಗೂ ಪ್ರಕೃತಿಯ ಸೊಬಗಿನ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ಇದನ್ನು ಸ್ಪರ್ಧಾ ನಿಯಮದಂತೆ ಆನ್‌ಲೈನ್‌ನಲ್ಲಿ ಆಪ್‌ಲೋಡ್ ಮಾಡಿದ್ದರು. ಇದರ ಬಗ್ಗೆ ಹಲವು ಸುತ್ತುಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿಯನ್ನು ಪ್ರವಾಸೋದ್ಯಮ ಮಂತ್ರಾಲಯ ಪಡೆದುಕೊಂಡಿತ್ತು. ದೇಶಾದ್ಯಂತ ನಡೆದ ‘ಅತ್ಯುತ್ತಮ ಪ್ರವಾಸಿ ಹಳ್ಳಿಗಳು’ ಸ್ಪರ್ಧೆಯಲ್ಲಿ ಕುತ್ತೂರು ಗ್ರಾಮ ಆಯ್ಕೆಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article