ಬಾಲಕಿಗೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಬಾಲಕಿಗೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್‌ಟಿಎಸ್‌ಸಿ-2 ಪೋಕ್ಸೋ ಕೋರ್ಟ್‌ನಲ್ಲಿ ಸಾಬೀತಾಗಿದೆ. ನ್ಯಾಯಾಲಯ ಅಪರಾಧಿಗೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸದಾಶಿವ ಶಿಕ್ಷೆಗೊಳಗಾದ ಆರೋಪಿ.

ಆರೋಪಿಯು ಬಾಲಕಿ ತಾಯಿಯ ಮೊಬೈಲ್‌ಗೆ ಕರೆ ಮಾಡಿ ಬಾಲಕಿ ಜತೆ ಮಾತನಾಡುತ್ತಿದ್ದ, ಮಾತ್ರವಲ್ಲದೆ ಫೇಸ್‌ಬುಕ್‌ನಲ್ಲೂ ಸಂಪರ್ಕವಿರಿಸಿಕೊಂಡಿದ್ದ. 2022ರ ಅ.9  ರಂದು ಬೆಳಗ್ಗೆ 10 ಗಂಟೆಗೆ ಆರೋಪಿ ಬೆಳ್ತಂಗಡಿ ವ್ಯಾಪ್ತಿಯಲ್ಲಿರುವ ಬಾಲಕಿಯ ಮನೆಗೆ ತೆರಳಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದನು. ಬಳಿಕ ಬಾಲಕಿಯ ಮನೆಯಿಂದ ತೆರಳಿದ ಆರೋಪಿ ಫೇಸ್‌ಬುಕ್ ಮೂಲಕವೂ ಅಶ್ಲೀಲ ಸಂದೇಶ ಹಾಕುತ್ತಿದ್ದ. 2022 ಅ.10 ರಂದು ಮತ್ತೆ ಫೇಸ್‌ಬುಕ್ ಸಂದೇಶ ಹಾಕಿದ್ದ ಆರೋಪಿ ಬಾಲಕಿ ಬಳಿ ‘ನನ್ನನ್ನು ಕ್ಷಮಿಸು, ಇನ್ನು ನಿನಗೆ ತೊಂದರೆ ಕೊಡಲ್ಲ, ನನ್ನಷ್ಟಕ್ಕೆ ನಾನಿರುವೆ’ ಎಂದು ಹೇಳಿದ್ದಾನೆ. ಇದರಿಂದ ನೊಂದ ಬಾಲಕಿ ಡೀಸೆಲ್ ಸೇವನೆ ಮಾಡಿದ್ದಳು. ಬಾಲಕಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್. ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದ ವಿಚಾರಣೆ ಸಂದರ್ಭ 14 ಸಾಕ್ಷಿದಾರರ ವಿಚಾರಣೆ, 33 ದಾಖಲೆಗಳನ್ನು ಗುರುತಿಸಲಾಗಿರುತ್ತದೆ. ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯಧಾರದಲ್ಲಿ ಅಪರಾಧ ಸಾಬೀತಾಗಿದೆ. ಈ ಪ್ರಕರಣದ ಆರೋಪಿ ಸದಾಶಿವನಿಗೆ ಅತ್ಯಾಚಾರ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆ ಕಲಂ 376(3) ಮತ್ತು 4(2)  ಪೊಕ್ಸೋ ಕಾಯಿದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಭಾರತೀಯ ದಂಡ ಸಂಹಿತೆ ಕಲಂ-354 ಮತ್ತು ಕಲಂ 8 ಪೋಕ್ಸೋ ಕಾಯಿದೆಯಂತೆ 3 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67ರಂತೆ 1 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ.

ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ವಾದ ಮಂಡಿಸಿದರು.

ದಂಡದ ಹಣವಾದ 50 ಸಾವಿರ ರೂ. ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ದಂಡ ಪ್ರಕ್ರಿಯೆ ಸಂಹಿತೆ ಕಲಂ 357(ಎ) ಪ್ರಕಾರ  ಮತ್ತು ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 1,50,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನೀಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article