ಸೆ.29 ರಂದು ಎಪಿಡಿಯಿಂದ ಪೊಲೀಸರಿಗೆ ಶ್ವಾಸಕೋಶ ಆರೋಗ್ಯ ತಪಾಸಣೆ
ಮಂಗಳೂರು: ಮಂಗಳೂರು ಮೂಲದ ಆಂಟಿ ಪೊಲ್ಯೂಶನ್ ಡ್ರೈವ್ ಫೌಂಡೇಶನ್ (ಎಪಿಡಿಎಫ್) ನೇತೃತ್ವದಲ್ಲಿ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ನ ಸಹಭಾಗಿತ್ವದಲ್ಲಿ ಮಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಸೆ.29 ರಂದು ಶಾಶ್ವಕೋಶದ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ.
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಪಿಡಿಎಫ್‌ನ ಸ್ಥಾಪಕ ಹಾಗೂ ಸಿಇಒ ಅಬ್ದುಲ್ಲಾ ಎ. ರೆಹಮಾನ್, ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಅತೀ ಹೆಚ್ಚಾಗಿ ಬಾಧೆಗೆ ಒಳಗಾಗುವವರು ಟ್ರಾಫಿಕ್ ಪೊಲೀಸರಾಗಿರುವ ಕಾರಣ ಅವರ ಆರೋಗ್ಯದ ತಪಾಸಣೆಗೆ ನಿರ್ಧರಿಸಲಾಗಿದೆ ಎಂದರು.
ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಕನಿಷ್ಟ 150 ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ತಪಾಸಣೆ ನಡೆಸುವ ಗುರಿ ಇದೆ. ತಪಾಸಣೆಯಲ್ಲಿ ಸಂಗ್ರಹಿಸಲಾಗುವ ಆರೋಗ್ಯ ಸಂಬಂಧಿ ಅಂಕಿಅಂಶಗಳ ವಿಶ್ಲೇಷಣೆಯ ಆಧಾರದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
2016-17ನೇ ಅವಧಿಯಲ್ಲಿ ಇದೇ ಫೌಂಡೇಷನ್ ವತಿಯಿಂದ ನಡೆಸಲಾದ ಸಂಶೋಧನೆಯ ವೇಳೆ ಮಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅದರಲ್ಲೂ ಶೇ.50 ರಷ್ಟು ಮಾಲಿನ್ಯಕ್ಕೆ ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಹೊಗೆ ಕಾರಣವಾಗುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರ ಇಲಾಖೆಯಿಂದ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಯು ಗುಣಮಟ್ಟ ತಪಾಸಣೆಯ ಯಂತ್ರವನ್ನೂ ಅಳವಡಿಸಲಾಗಿತ್ತು. ವಾಯು ಮಾಲಿನ್ಯದ ಕಾರಣ ಹೃದ್ರೋಗ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು ಕಂಡು ಬಂದಿದೆ ಎಂದು ವಿವರಿಸಿದರು.
ಎಪಿಡಿಎಫ್ ಯೋಜನಾ ಸಂಯೋಜಕಿ ಗೀತಾ ಸೂರ್ಯ, ಸಾರ್ವಜನಿಕ ಸಂಪರ್ಕ ಅಧಿಕಾರಿ ಭಾಸ್ಕರ ಅರಸ್ ಇದ್ದರು.