ಮೂಡುಬಿದಿರೆಯಲ್ಲಿ ಹೃದ್ರೋಗ ಜಾಗೃತಿಗಾಗಿ ನಡಿಗೆ-ಆರೋಗ್ಯವಂತ ಹೃದಯದಿಂದ ಆರೋಗ್ಯವಂತ ಜೀವನ: ಕೆ.ಪಿ. ಸುಚರಿತ ಶೆಟ್ಟಿ

ಮೂಡುಬಿದಿರೆಯಲ್ಲಿ ಹೃದ್ರೋಗ ಜಾಗೃತಿಗಾಗಿ ನಡಿಗೆ-ಆರೋಗ್ಯವಂತ ಹೃದಯದಿಂದ ಆರೋಗ್ಯವಂತ ಜೀವನ: ಕೆ.ಪಿ. ಸುಚರಿತ ಶೆಟ್ಟಿ


ಮೂಡುಬಿದಿರೆ: ಪ್ರತಿನಿತ್ಯ ಆರೇಳು ಸಾವಿರ ಹೆಜ್ಜೆಗಳನ್ನು ಹಾಕುವುದರಿಂದ ನಮ್ಮ ಪುಟ್ಟ ಹೃದಯದಲ್ಲಿ ರಕ್ತಪರಿಚಲನೆಯಾಗಿ ಉತ್ತಮ ರೀತಿಯ ಆರೋಗ್ಯವಂತ ಹೃದಯವಾಗುತ್ತದೆ ಆದ್ದರಿಂದ  ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಆರೋಗ್ಯವಂತ ಹೃದಯದಿಂದ ಆರೋಗ್ಯವಂತ ಜೀವನ ಸಾಗಿಸಬಹುದು ಎಂದು ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು.

ಅವರು ವಿಶ್ವ ಹೃದಯ ದಿನದ ಅಂಗವಾಗಿ ಮೂಡುಬಿದಿರೆಯ ಡಾಕ್ಟರ್ಸ್ ಅಸೊಸಿಯೇಶನ್, ಎಜೆ ಆಸ್ಪತ್ರೆ ಹಾಗೂ  ರೋಟರಿ ಕ್ಲಬ್ ಅಫ್ ಮೂಡುಬಿದಿರೆ ಟೆಂಪಲ್‌ಟೌನ್ ಸಹಯೋಗದಲ್ಲಿ  ವಿವಿಧ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ   ಹೃದ್ರೋಗದ ಬಗ್ಗೆ ಜಾಗೃತಿಗಾಗಿ   ನಡೆದ ನಡಿಗೆ (ವಾಕ್‌ಥಾನ್)  ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಕನ್ನಡ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

 ನಮ್ಮ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಾನವೀಯತೆ ಕೂಡಾ ಹೃದಯದ ಜತೆ ಹತ್ತಿರದ ಸಂಬಂಧವನ್ನು ಇಟ್ಟುಕೊಂಡಿದೆ. ದೇಶದ ಸಂಸ್ಕೃತಿ, ಸಮುದಾಯದ ಭಾವನೆಗಳು, ನಮ್ಮ ವೈವಿಧ್ಯತೆಗಳೆಲ್ಲವೂ ಜಗತ್ತಿನಲ್ಲಿ  ಉಳಿಯಬೇಕಾದರೆ ಆರೋಗ್ಯವಂತ ಹೃದಯ, ಮನಸನ್ನು ಸದಾ ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. 

ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖಸ್ಥ ಡಾ. ಬಿ ಮಂಜುನಾಥ ಹೃದ್ರೋಗದ ಕುರಿತು ಮಾಹಿತಿ ನೀಡಿ  ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂದ ಮೊದಲೇ ತಪಾಸಣೆ ನಡೆಸುವುದು ಮುಖ್ಯ. ಹೃದಯಾಘಾತಕ್ಕೆ ಒತ್ತಡದ ಜೀವನ ಶೈಲಿ, ಅನಿಯಮಿತ ನಿದ್ದೆ ಮತ್ತು ಆಹಾರ ಸೇವನೆ ಹಾಗೂ ದೈಹಿಕ ವ್ಯಾಯಾಮಗಳಿಲ್ಲದಿರುವುದು ಕಾರಣವಾಗಿದ್ದು ಇದನ್ನು ಸರಿಪಡಿಸಿಕೊಳ್ಳಬೇಕು. ಭಾರತೀಯರಲ್ಲಿ ಶೇ 30ರಷ್ಟು ಹೃದಯ ರೋಗಿಗಳು 40 ರ ವಯೋಮಿತಿಯಲ್ಲಿರುವುದು ಕಂಡು ಬರುತ್ತಿರುವುದು ಆತಂಕಕಾರಿಯಾಗಿದೆ ಎಂದರು.    

 ಮೂಡುಬಿದಿರೆ ರೋಟರಿ ಕ್ಲಬ್ ನ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ಆಲಂಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಲೀನಾ ಜೆಸಿಂತ ಡಿ'ಮೆಲ್ಲೋ, ಮೂಡುಬಿದಿರೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಬೋನವೆಂಚರ್ ಮಿನೇಜಸ್, ಇನ್ನರ್ ವೀಲ್ ಕ್ಲಬ್ ನ  ಸದಸ್ಯೆ ಶಾಲಿನಿ ಹರೀಶ್ ನಾಯಕ್, ಆಳ್ವಾಸ್ ನರ್ಸಿಂಗ್ ಕಾಲೇಜಿನ ಎನ್ ಎಸ್.ಎಸ್. ಸಂಯೋಜಕ ಶಿವಾನಂದ, ರೋಟರಿ ಕ್ಲಬ್ ಟೆಂಪಲ್‌ಟೌನ್ ನ ಅಧ್ಯಕ್ಷ ಪೂರ್ಣಚಂದ್ರ ಜೈನ್, ಕಾರ್ಯದರ್ಶಿ ಹರೀಶ್ ಎಂ.ಕೆ ಮತ್ತಿತರರು ಉಪಸ್ಥಿತರಿದ್ದರು.

ಡಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಡಾ. ಮಹಾವೀರ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನ ಹರೀಶ್ ಕಾಪಿಕಾಡ್ ಮತ್ತು ಡಾ.ಪ್ರಣಮ್ಯ ಜೈನ್  ಕಾರ್ಯಕ್ರಮ ನಿರೂಪಿಸಿದರು. 

ರೋಟರಿ ಕ್ಲಬ್ ಟೆಂಪಲ್ ಟೌನ್ ನ  ಅಧ್ಯಕ್ಷ ಪೂರ್ಣಚಂದ್ರ ಜೈನ್ ವಂದಿಸಿದರು.

ಇದೇ ಸಂದರ್ಭದಲ್ಲಿ ವ್ಯಕ್ತಿಗೆ ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಹೇಗೆ ಸ್ಪಂದಿಸಬಹುದು ಎಂಬ ಬಗ್ಗೆ ಪೋಲಿಸ್ ಮತ್ತು ಗೃಹರಕ್ಷಕ ದಳದ ಸಿಬಂದಿಗಳಿಗೆ ಮಾಹಿತಿ ನೀಡಲಾಯಿತು.

ಇದಕ್ಕೂ ಮೊದಲು  ರೋಟರಿ ಶಾಲೆಯಿಂದ ಕನ್ನಡ ಭವನದವರೆಗೆ ನಡೆದ ಜಾಗೃತಿ  ಜಾಥಾವನ್ನು ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು.

 ಜಾಥಾದಲ್ಲಿ ರೋಟರಿ ಕ್ಲಬ್, ರೋಟರಿ ಮಿಡ್‌ಟೌನ್, ಆಳ್ವಾಸ್ ನರ್ಸಿಂಗ್ ಕಾಲೇಜು, ಲಯನ್ಸ್ ಕ್ಲಬ್, ಜೇಸಿಸ್, ರೋಟರ್‍ಯಾಕ್ಟ್, ಲಿಯೋ ಕ್ಲಬ್‌ಗಳ 300ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article