ಮೂಡುಬೆಳ್ಳೆ ತಿರ‍್ಲಪಲ್ಕೆ ‘ಬೆಳಕು’ ಸಂಸ್ಥೆಯಿಂದ ಅಂಗವಿಕಲತೆ ಹೊಂದಿದ ಬಡ ವಿದ್ಯಾರ್ಥಿನಿಗೆ ನೆರವು
Wednesday, September 25, 2024
ಶಿರ್ವ: ಮೂಡುಬೆಳ್ಳೆ ತಿರ‍್ಲಪಲ್ಕೆ ‘ಬೆಳಕು’ ಸಂಸ್ಥೆಯ ಅಧ್ಯಕ್ಷ ಹಾಗೂ ಸಮಾಜಸೇವಕ ನಟೇಶ್ ಸೇರಿಗಾರ್ ಹಾಗೂ ಅವರ ತಂಡದವರಿಂದ ಮೂಡುಬೆಳ್ಳೆ ಸಂತ ಲಾರೆನ್ಸ್ ಪ್ರೌಢ ಶಾಲೆಯ 9ನೇ ತರಗತಿಯ ಅಂಗವಿಕಲತೆ ಹೊಂದಿದ ಶಿರ್ವ ಮಟ್ಟಾರಿನ ಬಡ ವಿದ್ಯಾರ್ಥಿನಿ ಪ್ರತಿಜ್ಞಾ ಅವರಿಗೆ ಸಾರ್ವಜನಿಕ ಗಣೇಶೋತ್ಸವದಂದು ವೇಷ ಹಾಕಿ ಸಂಗ್ರಹಿಸಿದ ಹಣದಲ್ಲಿ 90,901 ರೂ.ವನ್ನು ಶಾಲೆಯಲ್ಲಿ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಳೆದ 8 ವರ್ಷಗಳಿಂದ ವೇಷ ಹಾಕಿ ಸಂಗ್ರಹಿಸಿದ ಹಣದಲ್ಲಿ ಹಲವಾರು ಬಡ ಕುಟುಂಬಗಳಿಗೆ ನೆರವನ್ನು ನೀಡಿ ಅವರ ಬಾಳಿಗೆ ಬೆಳಕಾದ ‘ಬೆಳಕು’ ತಂಡಕ್ಕೆ ಗೌರವವಾಗಿ ನಟೇಶ್ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು.
ಬೆಳ್ಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐರಿನ್ ವೇಗಸ್, ಹಾಗೂ ಶಾಲಾ ನಾಯಕ ಅರಾನ್ ಸೊರೋನ್ಹಾ ಮತ್ತು ಬೆಳಕು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಪ್ರೌಢ ಶಾಲಾ ಹಿರಿಯ ಶಿಕ್ಷಕಿ ಸುನೀತಾ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜೋನ್ ಕಸ್ತಲಿನೊ ನಿರೂಪಿಸಿ, ವಂದಿಸಿದರು.