ಗ್ರಾಮ ಆಡಳಿತ ಅಧಿಕಾರಿಗಳಿಂದ ಮೌನ ಪ್ರತಿಭಟನೆ
ಉಡುಪಿ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕರೆಯಂತೆ ಉಡುಪಿ ಜಿಲ್ಲಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಮೌನ ಪ್ರತಿಭಟನೆ ಶುಕ್ರವಾರ ಆರಂಭವಾಯಿತು.
ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು 21 ಮೊಬೈಲ್ ತಂತ್ರಾಂಶಗಳನ್ನು ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ನಿಗದಿಪಡಿಸಬೇಕು. ಕಚೇರಿ, ಮೊಬೈಲ್, ಲ್ಯಾಪ್ಟಾಪ್ ಸಹಿತ ಮೂಲಭೂತ ಹಾಗೂ ಸೇವಾ ಸೌಲಭ್ಯ ಒದಗಿಸಬೇಕು. ಪ್ರಯಾಣ ಭತ್ಯೆ 500 ರೂ.ಗಳಿಂದ ೩ ಸಾವಿರ ರೂ.ಗಳಿಗೆ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರದಲ್ಲಾದ ಎಲ್ಲಾ ಅಮಾನತು ತಕ್ಷಣ ರದ್ದು, ಸರಕಾರಿ ರಜಾದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕಬಾರದು. ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ, ರಾಜಸ್ವ ನಿರೀಕ್ಷಕ ಹುದ್ದೆಗಳಿಗೆ ತಕ್ಷಣ ಪದೋನ್ನತಿ, ಕೆಲಸದ ಅವಧಿಯ ಮೊದಲು ಹಾಗೂ ಕೆಲಸ ಮುಕ್ತಾಯ ಬಳಿಕದ ಎಲ್ಲಾ ಬಗೆಯ ವರ್ಚುವಲ್ ಸಭೆಗಳಿಗೆ ಕಡ್ಡಾಯ ನಿಷೇಧ ವಿಧಿಸಬೇಕು.
ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವ ಹಾನಿಯಾಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ಮಂಜೂರು, ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಲಾಯಿತು.
ಜಿಲ್ಲಾಧ್ಯಕ್ಷ ಭರತ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್, ಉಪಾಧ್ಯಕ್ಷ ಶಿವರಾಜ್, ಕಾರ್ತಿಕೇಯ ಭಟ್, ಸಹ ಕಾರ್ಯದರ್ಶಿ ವಿದ್ಯಾಶ್ರೀ ಉಪಸ್ಥಿತರಿದ್ದರು.
ಗ್ರಾಮ ಆಡಳಿತಾಕಾಧಿರಿಗಳು ಪ್ರತೀ ತಾಲೂಕು ಕೇಂದ್ರದಲ್ಲಿ ಗುರುವಾರ ನಡೆಸಿದ ಪ್ರತಿಭಟನೆ ಶುಕ್ರವಾರದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿಗೆ ಆರಂಭವಾಗಿದ್ದು ಮೊಬೈಲ್ ಆಯ್ಯಪ್, ವೆಬ್ ಅಪ್ಲಿಕೇಶನ್, ಲೇಖನಿ ಕರ್ತವ್ಯ ಸ್ಥಗಿತವಾಗಿದೆ.