ಸರ್ಕಾರ ಪರ್ಯಾಯಕ್ಕೆ ಹಣ ಬಿಡುಗಡೆ ಭರವಸೆ ನೀಡಿಲ್ಲ: ಪ್ರಸಾದ್‌ರಾಜ್ ಕಾಂಚನ್

ಸರ್ಕಾರ ಪರ್ಯಾಯಕ್ಕೆ ಹಣ ಬಿಡುಗಡೆ ಭರವಸೆ ನೀಡಿಲ್ಲ: ಪ್ರಸಾದ್‌ರಾಜ್ ಕಾಂಚನ್


ಉಡುಪಿ: ಉಡುಪಿ ಪರ್ಯಾಯೋತ್ಸವಕ್ಕೆ ಸರಕಾರದಿಂದ ಹಣ ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಹಣ ಬಿಡುಗಡೆಯ ಆಶ್ವಾಸನೆಯನ್ನು ಸರಕಾರ ನೀಡಿರಲಿಲ್ಲ. ಹಾಗಾಗಿ ಶಾಸಕ ಯಶಪಾಲ್ ಸುವರ್ಣ ಪರ್ಯಾಯದ ಹಣ ಬಂದಿಲ್ಲ ಎನ್ನುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಪರ್ಯಾಯೋತ್ಸವ ಕಮಿಟಿಯಲ್ಲಿ ನಾನೂ ಇದ್ದೆ. ಹಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ವಿನಂತಿಸಲಾಗಿತ್ತು. ಸರಕಾರ ಬಿಡುಗಡೆ ಮಾಡುವುದಾಗಿ ಹೇಳಿಲ್ಲ. ಆಶ್ವಾಸನೆ ನೀಡಿ, ಬಿಡುಗಡೆ ಮಾಡದೇ ಇದ್ದಲ್ಲಿ ತಪ್ಪು. ಆದರೆ, ಸರಕಾರ ಈ ಬಗ್ಗೆ ಯಾವುದೇ ಆಶ್ವಾಸನೆ ನೀಡಿರಲಿಲ್ಲ ಎಂದವರು ತಿಳಿಸಿದರು.

ಉಡುಪಿ ಶಾಸಕರು ಜಿಲ್ಲೆಯಲ್ಲಿ 40 ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಇದುವರೆಗೆ 38,765 ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದು, ಅದರಲ್ಲಿ 37,395 ಕಾರ್ಡುದಾರರು ವಾರ್ಷಿಕ 1.20 ಲಕ್ಷ ಆದಾಯ ಹೊಂದಿರುವುದರಿಂದ ರದ್ದಾಗಿದೆ. ಬಡವರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ ಎಂಬ ಶಾಸಕರ ಹೇಳಿಕೆ ದಾಖಲೆ ಕೊಡಲಿ. ಇಲ್ಲವಾದಲ್ಲಿ ರಾಜೀನಾಮೆ ನೀಡುವುದು ಜಂಟಲ್ ಮ್ಯಾನ್‌ನ ಲಕ್ಷಣ ಎಂದರು.

ರಾಜ್ಯ ಸರಕಾರ ದಿವಾಳಿಯಾಗಿದೆ ಎಂಬ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ದಿವಾಳಿಯಾಗಿದೆ ಎನ್ನುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಿಂದ ಈ ಜಿಲ್ಲೆಗೆ ಎಷ್ಟು ಅನುದಾನ ಬಂದಿದೆ? ದೇಶದ ಬಜೆಟ್ 48 ಲಕ್ಷ ಕೋಟಿ. ರಾಜ್ಯದ ಬಜೆಟ್ 3.50 ಲಕ್ಷ ಕೋಟಿ. ಅದರಲ್ಲಿ 2 ಸಾವಿರ ಕೋಟಿಯನ್ನು ಈ ಕ್ಷೇತ್ರಕ್ಕೆ ತರಲಾಗದವರು ಯಾಕೆ ಶಾಸಕ ಸ್ಥಾನದಲ್ಲಿ ಇರಬೇಕು? ಮೋದಿ ಬಳಿ ಹೋಗಿ ಅನುದಾನ ಕೇಳಲಿ, ಅವರಿಗೆ ಭಯವಾದರೆ ನಮ್ಮನ್ನು ಕರೆದುಕೊಂಡು ಹೋಗಲಿ, ನಾವು ಅವರೊಂದಿಗೆ ಮಾತನಾಡುತ್ತೇವೆ ಎಂದರು.

ಶಾಸಕರಾಗಿ 1 ವರ್ಷ 4 ತಿಂಗಳು ಕಳೆದಿವೆ. ಇಂದ್ರಾಳಿ ರೈಲ್ವೆ ಮೇಲ್ಸೆತುವೆ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಮಲ್ಪೆ- ಹೆಬ್ರಿ ರಾಷ್ಟ್ರೀಯ ಹೆದ್ದಾರಿಯ ಆದಿವುಡುಪಿ ಭಾಗದ ಸಮಸ್ಯೆ ಪರಿಹಾರವಾಗಿಲ್ಲ. ಕೋಮು ಗಲಭೆ ಸೃಷ್ಟಿಸಿ ಶಾಸಕರಾಗಿದ್ದಾರೆ. ಆದರೆ, ಅಭಿವೃದ್ಧಿ ಕೆಲಸ ಮಾಡದೇ ಇದ್ದಲ್ಲಿ ಮುಂದಿನ ಬಾರಿಗೆ ಜನರು ಆಶೀರ್ವಾದ ಮಾಡುವುದಿಲ್ಲ ಎಂದು ಕಾಂಚನ್ ಎಚ್ಚರಿಸಿದರು.

ಸಿಎಂ ಸಿದ್ದರಾಮಯ್ಯ ಬಡವರಿಗೆ, ದೀನ ದುರ್ಬಲರಿಗೆ ನೀಡಿದ್ದಷ್ಟು ಅನುದಾನ ಬೇರೆ ಯಾವ ಮುಖ್ಯಮಂತ್ರಿಯೂ ನೀಡಿಲ್ಲ. ಆದರೆ, ಉಡುಪಿ ಶಾಸಕರ ಕಚೇರಿ ಯಾವಾಗಲೂ ಬಾಗಿಲು ಹಾಕಿರುತ್ತದೆ. ಕ್ಷುಲ್ಲಕ ಕಾರಣಗಳಿಗೆ ಶಾಸಕರು ಪತ್ರಿಕಾಗೋಷ್ಠಿ ನಡೆಸುವ ಬದಲು, ಈ ಭಾಗದ ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಸಲಿ. ಕ್ಷೇತ್ರದ ಅಭಿವೃದ್ಧಿಗೆ ಅವರೊಂದಿಗೆ ನಾವೂ ಕೈಜೋಡಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ಕಾಂಗ್ರೆಸ್ ಮುಖಂಡ ದಿನಕರ ಹೇರೂರು, ಎನ್.ಎಸ್.ಯು.ಐ ಮುಖಂಡ ಶರತ್ ಕುಂದರ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article