ಕೊಕ್ಕಡದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ: ಆರೋಪಿಗಳು ಪರಾರಿ
Friday, September 27, 2024
ಉಜಿರೆ: ಧರ್ಮಸ್ಥಳ ಪೊಲೀಸರು ಕೊಕ್ಕಡದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ಎಂಬಲ್ಲಿ ಉಸ್ಮಾನ್ ಎಂಬವರ ಅಡಿಕೆ ತೋಟದಲ್ಲಿ ಗೋಹತ್ಯೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುತಿದ್ದ ಸ್ಥಳದಲ್ಲಿ ಸುಮಾರು 10 ಕಿಲೋ ಗ್ರಾಂ. ಜಾನುವಾರಿನ ಮಾಂಸ, ಜಾನುವಾರಿನ ದೇಹದ ಇತರ ಭಾಗಗಳು, ಬ್ಯಾಟರಿ ಚಾಲಿತ ತೂಕದ ಯಂತ್ರ-1, ಚಾಕು ಸೇರಿದಂತೆ ಇತರ ಸೊತ್ತುಗಳು ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 5,250 ರೂ. ಆಗಿರುತ್ತದೆ. ಗೋಮಾಂಸ ಮಾಡುತ್ತಿದ್ದ ಅಡ್ಡೆಗೆ ಧರ್ಮಸ್ಥಳ ಠಾಣಾಧಿಕಾರಿ ಕಿಶೋರ್ ಪಿ. ಹಾಗೂ ಠಾಣಾ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಉಸ್ಮಾನ್ ಮತ್ತು ಸಲೀಂ ಎಂಬವರ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆಯನ್ವಯ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.