ಮಾದಕ ವಸ್ತು ಸೇವನೆ: ಆರೋಪಿ ಪೊಲೀಸ್ ವಶಕ್ಕೆ
Friday, September 27, 2024
ಉಳ್ಳಾಲ: ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಟೆ ನಿತ್ಯಾನಂದ ನಗರದಲ್ಲಿ ಗುರುವಾರ ನಡೆದಿದೆ.
ಎರ್ನಾಕುಲಂ ನಿವಾಸಿ ಜ್ಯೂಡ್ ಜೇಕಬ್ (27) ಎಂಬಾತ ನಿತ್ಯಾನಂದ ನಗರದಲ್ಲಿದ್ದ ಸಂದರ್ಭದಲ್ಲಿ ಸಂಶಯದ ಮೇರೆಗೆ ಪೊಲೀಸರು ಆತನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಆರೋಪಿ ಮಾದಕ ವಸ್ತು ಸೇವಿಸಿರುವುದನ್ನು ಒಪ್ಪಿಕೊಂಡಿದ್ದ. ಹೆಸರು ಮತ್ತು ವಿಳಾಸವನ್ನು ತನಿಖೆ ವೇಳೆ ತಿಳಿಸಿದ್ದ ಎನ್ನಲಾಗಿದೆ.
ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರು ಡಿ.ಪಿ.ಎಸ್. ಕಾಯ್ದೆ 1985 ಯಂತೆ ಪ್ರಕರಣ ದಾಖಲು ಮಾಡಿದ್ದಾರೆ.