
ರೈಲ್ವೇ ಇಲಾಖೆಯ ಪಾಳು ಬಿದ್ದಿದ್ದ ಶೆಡ್ ತೆರವು
ಬಂಟ್ವಾಳ: ರೈಲ್ವೆ ನಿಲ್ದಾಣದ ಬಳಿ ದಶಕಗಳಿಂದ ಕಾರ್ಯಾಚರಿಸುತ್ತಿದ್ದು, ಬಳಿಕ ಪಾಳು ಬಿದ್ದಿದ್ದ ರೈಲ್ವೆ ಶೆಡ್ ಅನ್ನು ಬುಧವಾರ ತೆರವುಗೊಳಿಸಲಾಯಿತು.
ಅಕ್ಟೋಬರ್ 19ರಂದು ರೈಲ್ವೆ ಇಂಜಿನಿಯರ್ ರಾಮಪ್ರಿಯ ಬಂಟ್ವಾಳ ರೈಲ್ವೆ ನಿಲ್ದಾಣ ಸಹಿತ ಮಾರ್ಗದ ತಪಾಸಣೆಗೆಂದು ಬಂದಿದ್ದ ಸಂದರ್ಭ, ಸ್ಥಳೀಯರು ಅವರನ್ನು ಭೇಟಿಯಾಗಿ ರೈಲ್ವೆ ಶೆಡ್ ನಿರುಪಯುಕ್ತವಾಗಿ ಈ ಶೆಡ್ ತೆರವುಗೊಳಿಸುವಂತೆ ಒತ್ತಾಯಿಸಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಇಂಜಿನಿಯರ್ ಜೆಸಿಬಿಯಿಂದ ಶೆಡ್ ಅನ್ನು ತೆರವಿಗೆ ಸೂಚಿಸಿದ್ದರು. ಈ ಸಂದರ್ಭ ರೈಲ್ವೆ ಹೋರಾಟಗಾರ ಸುದರ್ಶನ ಪುತ್ತೂರು ಜತೆಗಿದ್ದರು.
ಇದೀಗ ಬುಧವಾರ ಜೆಸಿಬಿ ಮೂಲಕ ಶೆಡ್ ತೆರವುಗೊಳಿಸಲಾಗಿದೆ. ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ ಹಿಂಬದಿ ಇರುವ ರೈಲ್ವೆ ಜಾಗದಲ್ಲಿ ಮೀಟರ್ ಗೇಜ್ ರೈಲುಗಳು ಓಡುತ್ತಿದ್ದ ಕಾಲಕ್ಕೆ ಸಿಬಂದಿಗಳು ಉಳಿದುಕೊಳ್ಳುವ ಸಲುವಾಗಿ ಕಾರ್ಮಿಕರ ವಸತಿಗೃಹ ಮಾಡಲಾಗಿತ್ತು.
ಕಬ್ಬಿಣದ ಕಂಬಗಳಿಂದ ಕೂಡಿದ ಶೆಡ್ ಇದಾಗಿದ್ದು, ಗಟ್ಟಿಮುಟ್ಟಾಗಿತ್ತು. ಕೆಲ ವರ್ಷಗಳ ಕಾಲ ಇಲ್ಲಿ ವಾಸ್ತವ್ಯವಿದ್ದ ಕಾರ್ಮಿಕರು ತೆರಳಿದ ನಂತರ ಖಾಲಿ ಉಳಿದಿತ್ತು.
ಸುಮಾರು ಇಪ್ಪತ್ತೈದು ವರ್ಷಗಳಿಂದೀಚೆಗೆ ಈ ಶೆಡ್‌ನಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ಅಪರಿಚಿತರು ಬಂದು ತಂಗುವುದು, ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದು, ಸುತ್ತಮುತ್ತಲಿನವರಿಗೂ ಆತಂಕ ತಂದೊಡ್ಡಿತ್ತು. ಇದೀಗ ಶೆಡ್ ತೆರವುಗೊಳಿಸಲಾಗಿದ್ದು, ರೈಲ್ವೆ ಇಲಾಖೆ ತನ್ನ ಇತರ ಚಟುವಟಿಕೆಗಳಿಗೆ ಈ ಜಾಗವನ್ನು ಬಳಸಿಕೊಳ್ಳಲಿದೆ.