
ಜನರನ್ನು ಅರಿತು ನಗುಮೊಗದ ಸೇವೆ ನೀಡಿದರೆ ಬ್ಯಾಂಕ್ ಅಭಿವೃದ್ಧಿ: ಡಾ. ಎಂ.ಎನ್. ರಾಜೇಂದ್ರ ಕುಮಾರ್
ಎಸ್ ಸಿಡಿಸಿಸಿ ಬ್ಯಾಂಕ್ ಸಾಯಬ್ರಕಟ್ಟೆ ಶಾಖೆ ಉದ್ಘಾಟನೆ
ಬ್ರಹ್ಮಾವರ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಸಾಯಬ್ರಕಟ್ಟೆ ಶಾಖೆಯು ಸೋಮವಾರ ಬೆಳಗ್ಗೆ ಇಲ್ಲಿನ ಎಸ್.ಎಸ್. ಕಾಂಪ್ಲೆಕ್ಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ದೀಪ ಪ್ರಜ್ವಲನೆಗೈದು ಬ್ಯಾಂಕ್ ಶಾಖೆ, ಎಟಿಎಂ ಉದ್ಘಾಟನೆ ನೆರವೇರಿಸಿದರು.
ಬಳಿಕ ಮಾತಾಡಿದ ಅವರು, ಜನರಿಗೆ ಬೇಕಾಗಿ ಮೇಲಿನ ಅಂತಸ್ತಿನಿಂದ ನೆಲ ಅಂತಸ್ತಿಗೆ ಬ್ಯಾಂಕ್ ಅನ್ನು ಸ್ಥಳಾಂತರ ಮಾಡಲಾಗಿದೆ. ಸ್ವಾತಂತ್ರ್ಯ ಸಿಗುವ ಮೊದಲೇ ನಮ್ಮ ಸಹಕಾರಿ ಕ್ಷೇತ್ರ ಹುಟ್ಟಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ವಾಣಿಜ್ಯ ಬ್ಯಾಂಕ್ ಗಳೇ ಕಾಣೆಯಾಗಿವೆ. ಈಗಿರುವ ಬ್ಯಾಂಕ್ ಗಳಲ್ಲಿ ಭಾಷೆ ಬಾರದವರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ನಮ್ಮ ಸಹಕಾರಿ ಬ್ಯಾಂಕ್ ಗಳಲ್ಲಿ ಜನರ ಸಂಸ್ಕೃತಿ, ಭಾಷೆ ಬಲ್ಲವರೇ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿದೆ. ನಮ್ಮ ನಗುಮೊಗದ ಸೇವೆಯಿಂದಾಗಿ ಗ್ರಾಹಕರು ಸಂತೃಪ್ತರಾಗಿದ್ದಾರೆ. ಜನರ ಕಷ್ಟ ಸುಖ ಅರಿತು ಮದುವೆ ಮತ್ತಿತರ ಶುಭ ಸಂದರ್ಭದಲ್ಲಿ ಕೆಲವೇ ಗಂಟೆಗಳಲ್ಲಿ ಲೋನ್ ನೀಡುವ ಬ್ಯಾಂಕ್ ಇದ್ದರೆ ಅದು ನಮ್ಮದು ಮಾತ್ರ. ನಾವು ಯಾರಿಗೂ ಕೇಡು ಮಾಡಬಾರದು. ಕೇಡು ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ ಎಂದು ಹೇಳಿದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಹಕಾರಿ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಎಸ್ ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಕೈಗೆ ಶಕ್ತಿ ತುಂಬುವ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಇಂದಿಗೂ ಯುವಕರಂತೆ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವ ಅವರ ಯಶಸ್ಸಿನ ಗುಟ್ಟು ಶಿಸ್ತು ಮತ್ತು ಬದ್ಧತೆ. ಸಂಘಟನೆಯ ಮೂಲಕ ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸ ಹೀಗೆಯೇ ನಡೆಯಲಿ ಎಂದರು.
ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಳ್ಳಾಲ್ ಮಾತನಾಡಿ, ಜನರು ಹಣಕ್ಕಾಗಿ ಅಧಿಕ ಬಡ್ಡಿ ವಸೂಲಿ ಮಾಡುವ ಬಡ್ಡಿ ದಂಧೆಗೆ ಬಲಿಯಾಗುವುದನ್ನು ತಡೆಯಲು ರಾಜೇಂದ್ರ ಕುಮಾರ್ ಅವರು ಬ್ಯಾಂಕ್ ನಿಂದ ಕನಿಷ್ಠ ದಾಖಲೆಯಡಿಯಲ್ಲಿ ಗರಿಷ್ಠ ಸಾಲ ನೀಡುತ್ತಿದ್ದಾರೆ. ಗ್ರಾಮದ ಜನರು ಇಂತಹ ಬ್ಯಾಂಕ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಗ್ರಾಹಕರಿಗೆ ಬೇಕಾಗಿ ಹವಾನಿಯಂತ್ರಿತ ಸುಸಜ್ಜಿತ ಬ್ಯಾಂಕ್ ಶಾಖೆಯನ್ನು ಇಲ್ಲಿ ತೆರೆಯಲು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕಾರಣರಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.
ಬ್ಯಾಂಕ್ ಗ್ರಾಹಕರಿಗೆ ಠೇವಣಿ ಪತ್ರ, ಸ್ವಸಹಾಯ ಸಾಲ ಪತ್ರ ವಿತರಣೆ, ಹೊಸ ಸ್ವಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಶಿರಿಯಾರ ಪಂಚಾಯತ್ ಅಧ್ಯಕ್ಷ ಸುಧೀದ್ರ ಶೆಟ್ಟಿ, ಶಾಖಾ ಕಟ್ಟಡ ಮಾಲಕರಾದ ಶರತ್ ಕುಮಾರ್ ಶೆಟ್ಟಿ ಮತ್ತು ಶ್ರೀ ಸುರೇಶ್ ಶೆಟ್ಟಿ ಬಿ., ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಜಿಲ್ಲಾ ಉಪ ನಿಬಂಧಕಿ ಲಾವಣ್ಯ, ಶಶಿಕುಮಾರ್ ರೈ ಬೊಳ್ಯೊಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಬ್ಯಾಂಕ್ ನಿರ್ದೇಶಕರುಗಳಾದ ಟಿ.ಜಿ.ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ದೇವಿಪ್ರಸಾದ್ ಶೆಟ್ಟಿ, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಕೆ.ಜೈರಾಜ್ ಬಿ.ರೈ, ಕುಶಾಲಪ್ಪ ಗೌಡ ಪಿ, ಎಸ್.ಎನ್.ಮನ್ಮಥ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ರಮೇಶ್ ಹೆಚ್.ಎನ್. ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ, ಸ್ವಾಗತಿಸಿದರು. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು.