
ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ
ಕಿನ್ನಿಗೋಳಿ: ಕನ್ನಡ ರಾಜ್ಯೋತ್ಸವದ ಸುಸಂದರ್ಭ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ, 78ನೇ ವರ್ಷದ ಸಂಭ್ರಮದಲ್ಲಿರುವ ದಿ.ಕೊ.ಅ. ಉಡುಪರಿಂದ ಸಂಸ್ಥಾಪಿಸಲ್ಪಟ್ಟ ‘ಯುಗಪುರುಷ’ ಸಂಸ್ಥೆಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನವೆಂಬರ್ 1ರಂದು ಅಪರಾಹ್ನ 3 ಗಂಟೆಯಿಂದ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರುರವರು ವಹಿಸಲಿದ್ದಾರೆ. ಹಿರಿಯ ಸಾಹಿತಿ, ವಾಸ್ತುತಜ್ಞ ಡಾ. ಪದ್ಮನಾಭ ಭಟ್ ಎಕ್ಕಾರು ಹಾಗೂ ಹಿರಿಯ ತಜ್ಞ ವ್ಯವಸಾಯಗಾರ ಭೋಜ ದೇವಾಡಿಗ ಎಣ್ಣೆಗೇರಿ ಇವರನ್ನು ಅಗರಿ ಎಂಟರ್‌ಪ್ರೈಸಸ್‌ನ ಮಾಲಕರಾದ ಅಗರಿ ರಾಘವೇಂದ್ರ ರಾವ್ ಅವರು ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಿರುವರು.
‘ಕನ್ನಡ ಭಾಷೆ ಉಳಿಸಿ ಬೆಳೆಸೋಣ’ ಈ ವಿಷಯದಲ್ಲಿ ಸಾಹಿತಿ ಮೋಹನದಾಸ ಸುರತ್ಕಲ್‌ರವರು ಉಪನ್ಯಾಸ ನೀಡಲಿರುವರು. ಕರ್ನಾಟಕ ಜಾನಪದ ಪರಿಷತ್ತಿನ ಮೂಡುಬಿದ್ರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್, ಕಾ.ವೀ. ಕೃಷ್ಣದಾಸ, ರಾಜೇಂದ್ರಪ್ರಸಾದ್ ಎಕ್ಕಾರು ಇವರು ಉಪಸ್ಥಿತರಿರುವರು.
ವಾಯ್ಸ್ ಆಫ್ ಆರಾಧನಾ ತಂಡದವರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಶಶಿಕಲಾ ಕೆಮ್ಮಡೆ ಇವರಿಂದ ಕನ್ನಡ ಗೀತಗಾಯನ ಜರಗಲಿದೆಯೆಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.