
ರೈಲಿನಿಂದ ಬಿದ್ದು ಗಂಭೀರ ಗಾಯ
ಕುಂದಾಪುರ: ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಕೋಟ ಸಮೀಪದ ಬೇಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಮಧ್ಯಾಹ್ನ 12ಕ್ಕೆ ಪುಣೆ ಕಡೆ ತೆರಳುವ ಪುಣೆ ಎಕ್ಸ್‌ಪ್ರೆಸ್ ರೈಲಿನಿಂದ ಬಿದ್ದು, ಗಂಭೀರ ಗಾಯಗೊಂಡಿದ್ದಾನೆ.
ಮುಖಚಹರೆ ನೋಡಿದರೆ ಈಶಾನ್ಯ ರಾಜ್ಯ ಮೂಲದ ವ್ಯಕ್ತಿ ಎಂದು ಕಂಡುಬಂದಿದ್ದು, ನವರಾತ್ರಿ ಉತ್ಸವಕ್ಕೆ ಊರಿಗೆ ಹೊರಟಿರುವ ಬಗ್ಗೆ ಶಂಕಿಸಲಾಗಿದೆ.
ಆತ ರೈಲಿನಿಂದ ಬಿದ್ದ ಸಂದರ್ಭ ಸ್ಥಳದಲ್ಲಿ ಮಹಿಳೆಯೋರ್ವರು ಗದ್ದೆ ಕೆಲಸ ಮಾಡುತ್ತಿದ್ದರು. ತಕ್ಷಣ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ, ಸ್ಥಳಕ್ಕೆ ಬಂದ ಜೀವನ್‌ಮಿತ್ರ ನಾಗರಾಜ್ ಪುತ್ರನ್ ಗಾಯಾಳು ವ್ಯಕ್ತಿಯನ್ನು ತಮ್ಮ ಅಂಬ್ಯೂಲೆನ್ಸ್‌ನಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಯಿತು. ಇನ್ನೂ ಕೂಡ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು, ಆತನ ಕುರಿತು ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.
ಸ್ಥಳಕ್ಕೆ ಕೋಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.