.jpeg)
14 ಸೈಟ್ ಹಿಂದುರಿಗಿಸಿ ತಪ್ಪು ಒಪ್ಪಿಕೊಂಡ ಸಿಎಂ: ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಸಿಎಂ ಸಿದ್ದರಾಮಯ್ಯನವರು ವಾಲ್ಮಿಕಿ ಹಗರಣವನ್ನು ನೇರವಾಗಿ ಒಪ್ಪಿಕೊಂಡ ನಂತರ ಮೂಡಾ ಹಗರಣವು ಬೆಳಕಿಗೆ ಬಂದಿದ್ದು, ಹೈಕೋರ್ಟ್ ತನಿಖೆಗೆ ಸೂಚಿಸಿದ ನಂತರ ಮೂಡಾಗೆ 14 ಸೈಟ್‌ಗಳನ್ನು ಹಿಂದಿರುಗಿಸಿರುವುದು ತಪ್ಪನ್ನು ಒಪ್ಪಿಕೊಂಡಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದರು.
ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರಾಜ್ಯಪಾಲರು ತನಿಖೆಗೆ ಸೂಚಿಸಿದಾಗ ಅದನ್ನು ಮುಖ್ಯಮಂತ್ರಿಗಳು ವಿರೋಧಿಸಿದರು. ನಂತರದಲ್ಲಿ ಹೈಕೋರ್ಟ್ ತನಿಖೆಗೆ ಆದೇಶಹೊರಡಿಸಿದ್ದು, ಮುಖ್ಯಮಂತ್ರಿಗಳು ರಾಜಿನಾಮೆ ನೇಡಿ ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ನಮ್ಮ ದೇಶವನ್ನು ಬಾಂಗ್ಲಾ ಮಾದರಿಯಲ್ಲಿ ಆಗುತ್ತದೆ ಎಂದು ಹೇಳಿದ್ದಕ್ಕೆ ನಾವು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಂತಹ ಸಂದರ್ಭದಲ್ಲಿ ಪೊಲೀಸರು ದೂರನ್ನು ಸ್ವೀಕರಿಸದೇ, ಕಾಂಗ್ರೆಸ್ ಪರ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತಿದ್ದು, ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಿಎಂ ಕುರ್ಚಿಯಲ್ಲಿ ಕೂತಿರುವಾಗ ಅಧಿಕಾರಿಗಳು ಯಾವ ರೀತಿಯಲ್ಲಿ ಪಾರದರ್ಶಕವಾಗಿ ತನಿಖೆ ಮಾಡಲು ಸಾಧ್ಯ ಎಂದು ಸಂಸದರು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರು ತನ್ನ ೪೦ ವರ್ಷದ ರಾಜಕೀಯದಲ್ಲಿ ಒಂದೂ ಕಪ್ಪು ಚುಕ್ಕಿ ಇಲ್ಲ ಎಂದು ಹೇಳುತ್ತ ಬಂದಿದ್ದರು ಆದರೆ ಈಗ ನೋಡಿದರೆ ಅವರ ಜೀವರ ಕಪ್ಪು ಚುಕ್ಕಿಯಲ್ಲಿಯೇ ತುಂಬಿ ಹೋಗಿದ್ದು, ಬಿಳಿ ಬಣ್ಣ ಎಲ್ಲಿದೆ ಎಂದು ಹುಡುಕುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದ ಚೌಟರು, ಸಿದ್ದರಾಮಯ್ಯ ಅವರು ಸಂವಿಧಾನಕ್ಕೆ ಅಗೌರವ ನೀಡಿ, ಸಿಎಂ ಕುರ್ಚಿಗೆ ಅಟಿಕೊಂಡಿದ್ದು, ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಒಂದುವರೆ ವರ್ಷದಿಂದ ರಾಜ್ಯ ಸರ್ಕಾರ ಗೊತ್ತುಗುರಿ ಇಲ್ಲದ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದು, ರಾಜ್ಯದ ಬೊಕ್ಕಸವನ್ನು ಸಿಎಂ ಮನೆಯಲ್ಲಿಯೇ ಕೂತು ಕೊಳ್ಳೆಹೊಡೆದಿದ್ದಾರೆ ಎಂದ ಅವರು ಕಾಂಗ್ರೆಸ್‌ನಲ್ಲಿ ಇರುವವರೆಲ್ಲರೂ ಅಧಿಕಾರದ ಆಸೆಯಲ್ಲಿದ್ದು, ಸಂವಿಧಾನಕ್ಕೆ ಅಗೌರವ ತೋರುತ್ತಾರೆ. ಕಾಂಗ್ರೆಸ್ ಪಕ್ಷದ ಮಾನಸಿಕತೆ ಮತ್ತು ಡಿಎನ್‌ಎಯಲ್ಲಿಯೇ ಅಧಿಕಾರ ಅಂಟಿಕೊಂಡಿರುವುದರಿಂದ ರಾಜಿನಾಮೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಡಾ. ಭರತ್ ಶೆಟ್ಟಿ ವೈ., ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ರಾಕೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಯಲ್ಲಿ ಒಂದೇ ಬಣ:
ಹೈಕಮಾಂಡ್ ಸೂಚನೆಯಂತೆ ಬಿಜೆಪಿ ರಾಜ್ಯಾಧ್ಯಕ್ಷರ ನಿರ್ದೇಶನದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಯಾವುದೇ ಪ್ರತ್ಯೇಕ ಬಣವಿಲ್ಲ. ಸಾಕಷ್ಟು ಕಾರ್ಯಕರ್ತರು ಟಿಕೇಟ್ ಆಕಾಂಕ್ಷಿಗಳಿದ್ದರು ಆದರೆ ಹೈಕಮಾಂಡ್ ಒಂದು ಬಾರಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ ಎಲ್ಲರೂ ಒಟ್ಟಾಗಿ ಬೆಂಬಲಿಸುತ್ತೇವೆ. ಯಾರು ಪಕ್ಷದ ನಿರುವಿಗೆ ವಿರುದ್ಧ ಹೋಗುತ್ತಾರೋ ಅಂತವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಂಸದರು ಉತ್ತರಿಸಿದರು.
ನಾಳೆ ನಾಮಪತ್ರ ಸಲ್ಲಿಕೆ:
ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ವಿಧಾನ ಪರಿಷತ್ ಸ್ಥಾನಕ್ಕೆ ಕಿಶೋರ್ ಕುಮಾರ್ ಪುತ್ತೂರು ಆಯ್ಕೆಯಾಗಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದೇವೆ. ಈ ಸಂದರ್ಭದಲ್ಲಿ ಎರಡು ಜಿಲ್ಲೆಯ ಸಂಸದರುಗಳು, ಶಾಸಕರುಗಳು, ಎರಡು ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು, ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು.