
ಅ.5 ರಂದು ಸಿಂಹದ ಕಲೊಟು ಪಿಲಿ ಗೊಬ್ಬು
ಮಂಗಳೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಡಿ ನೇತೃತ್ವದಲ್ಲಿ ‘ಸಿಂಹದ ಕಲೊಟು ಪಿಲಿಗೊಬ್ಬು’ ಕಾರ್ಯಕ್ರಮ ಅ.5ರಂದು ಸಂಜೆ ಕದ್ರಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸಂಯೋಜಕ ನಿಖಿಲ್ ಬಿ.ಶೆಟ್ಟಿ , ಅ.5ರಂದು ಸಂಜೆ 4ಕ್ಕೆ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಿಂದ ಮೆರವಣಿಗೆ ಹೊರಡಲಿದ್ದು, ಮೆರವಣಿಗೆಯಲ್ಲಿ ಲಯನ್ಸ್ ಹಾಗೂ ಲಿಯೋ ತಂಡದವರ ಹುಲಿ ನೃತ್ಯತಂಡ ಹಾಗೂ ಮಂಗಳೂರಿನ ಆಯ್ದ ಮೂರು ಪ್ರತಿಷ್ಠಿತ ತಂಡಗಳು ಪಾಲ್ಗೊಳ್ಳಲಿವೆ. ಬಳಿಕ ಕದ್ರಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ ಎಂದರು.
ಸಮಾರಂಭದಲ್ಲಿ ಹುಲಿ ವೇಷದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡ 9 ಮಂದಿಯನ್ನು ಸನ್ಮಾನಿಸಲಾಗುವುದು. ಹುಲಿ ವೇಷದ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಉದಯ್ ಮಾಸ್ಟರ್ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಅನಂತರ 3 ಪ್ರತಿಷ್ಠಿತ ಹುಲಿವೇಷ ತಂಡಗಳಿಂದ ಪ್ರದರ್ಶನ ನಡೆಯಲಿದೆ. ಜಿಲ್ಲಾ ಗವರ್ನರ್ ಭಾರತಿ ಬಿ.ಎಂ ಅವರ ಸಾರಥ್ಯದಲ್ಲಿ ಈ ಕಾರ್ಯಕ್ರಮ ಜರಗಲಿದೆ ಎಂದು ನಿಖಿಲ್ ತಿಳಿಸಿದರು.
ಲಯನ್ಸ್ ಜಿಲ್ಲಾ ರಾಜ್ಯಪಾಲರ ಸಂಯೋಜಕಿ ಉಮಾ ಬಿ.ಹೆಗ್ಡೆ, ಜೊತೆ ಸಂಯೋಜಕ ಸುಜಿತ್ ಕುಮಾರ್, ಜ್ಯೋತಿ ಉಪಸ್ಥಿತರಿದ್ದರು.