
ಅ.6 ರಂದು ಮುದ್ದುಶಾರದೆ, ನವದುರ್ಗೆ ಸ್ಪರ್ಧೆ
ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಮಂಗಳೂರಿನ ಶರಧಿ ಪ್ರತಿಷ್ಠಾನದ ವತಿಯಿಂದ ಅ.6ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ‘ಮುದ್ದು ಶಾರದೆ ಮತ್ತು ನವದುರ್ಗೆ ವೇಷ ಸ್ಪರ್ಧೆ-2024’ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ ಮತ್ತು ಸದಸ್ಯ ದಿನೇಶ್ ಹೊಳ್ಳ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆ ಅಂದು ಪೂರ್ವಾಹ್ನ 10ರಿಂದ ನಡೆಯಲಿದ್ದು ಉಡುಪಿ, ದ.ಕ, ಕಾಸರಗೋಡು ವ್ಯಾಪ್ತಿಯ ಮಕ್ಕಳು ಪಾಲ್ಗೊಳ್ಳಬಹುದು. 1ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರೋತ್ಸಾಹಕ ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ ಹಾಗೂ ಇತರ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಸ್ತಬ್ಧಚಿತ್ರ, ನೃತ್ಯ ಅಭಿನಯ, ಶ್ಲೋಕ, ಹಾಡು ಹಾಡಲು ಅವಕಾಶ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರನ್ನು ಬಿಜೈನ ಪುನೀಕ್ ಸ್ಟುಡಿಯೋದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಪುನೀಕ್ ಶೆಟ್ಟಿ ತಿಳಿಸಿದರು.
ಸದಸ್ಯರಾದ ಡಾ.ಎಂ.ಜಗದೀಶ ಶೆಟ್ಟಿ ಬಿಜೈ, ಭಾರತಿ ಶೆಟ್ಟಿ ಉಪಸ್ಥಿತರಿದ್ದರು.