
ಸುಟ್ಟು ಕರಕಲಾದ ಹೊಸ ಟಿವಿಎಸ್ ಎಂಟಾರ್ಕ್
ಮಂಗಳೂರು: ತಿಂಗಳ ಹಿಂದೆ ಖರೀದಿಸಿದ ಟಿವಿಎಸ್ ಎಂಟಾರ್ಕ್ ಸ್ಕೂಟರ್ ಒಂದು ತನ್ನಷ್ಟಕ್ಕೆ ಬೆಂಕಿ ಹತ್ತಿ ಹೊತ್ತಿ ಉರಿದ ಘಟನೆ ಕುಂಪಲ ವಿದ್ಯಾನಗರದಲ್ಲಿ ಕಳೆದ ತಡರಾತ್ರಿ ನಡೆದಿದೆ.
ಕುಂಪಲ ವಿದ್ಯಾನಗರ ನಿವಾಸಿ ಐಟಿಐ ಕಲಿಯುತ್ತಿರುವ ರಾಕೇಶ್ ಎಂಬ ವಿದ್ಯಾರ್ಥಿ ತಿಂಗಳ ಹಿಂದೆ ಖರೀದಿಸಿದ್ದ ಟಿವಿಎಸ್ ಕಂಪನಿಯ ಎಂಟಾರ್ಕ್ ಸ್ಕೂಟರ್ ಹೊತ್ತಿ ಉರಿದಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ರಾತ್ರಿ 12.30ರ ವೇಳೆಗೆ ತನ್ನಷ್ಟಕ್ಕೆ ಬೆಂಕಿ ಹತ್ತಿದ್ದು ಧಗಧಗನೆ ಉರಿದು ಸುಟ್ಟು ಕರಕಲಾಗಿದೆ. ಘಟನೆಯಿಂದ ಮನೆಯ ಗೋಡೆ, ಕಿಟಕಿಗಳ ಗಾಜುಗಳು, ಒಣಗಲು ಹಾಕಲಾದ ಬಟ್ಟೆಗಳು ಸುಟ್ಟು ಕರಕಲಾಗಿ ಅಪಾರ ನಷ್ಟ ಉಂಟಾಗಿದೆ. ಮನೆಗೂ ಬೆಂಕಿ ವ್ಯಾಪಿಸಲಿದ್ದು ನಿದ್ದೆಯಿಂದ ಎಚ್ಚೆತ್ತ ಮನೆ ಮಂದಿ ಬೆಂಕಿಯನ್ನ ನಂದಿಸಿದ್ದಾರೆ. ಮನೆಯೊಳಗೆ ರಾಕೇಶ್ ಸೇರಿದಂತೆ ಅವರ ತಂದೆ, ತಾಯಿ, ಅಕ್ಕ ಮಲಗಿದ್ದು ಸ್ಕೂಟರ್ ಗೆ ಬೆಂಕಿ ತಗುಲಿದ ವೇಳೆ ನಿದ್ದೆಯಿಂದ ಎಚ್ಚೆತ್ತು ಬೆಂಕಿಯನ್ನ ನಂದಿಸಿದ ಪರಿಣಾಮ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.
ಬಡ ಕುಟುಂಬದ ರಾಕೇಶ್ ಅವರು ಓದಿನೊಂದಿಗೆ ಪಾರ್ಟ್ ಟೈಮ್ ಕೆಲಸ ಮಾಡಿ ತಿಂಗಳ ಹಿಂದಷ್ಟೆ ತೊಕ್ಕೊಟ್ಟಿನ "ಸೋನಾ ಟಿವಿಎಸ್" ಶೋರೂಂನಲ್ಲಿ ಸ್ಕೂಟರ್ ಖರೀದಿಸಿದ್ದರು. ಎರಡು ದಿನಗಳ ಹಿಂದಷ್ಟೆ ಸ್ಕೂಟರಿನ ಮೊದಲ ಇಎಮ್ ಐ ಕಂತನ್ನು ಕಟ್ಟಿದ್ದರು. ಸ್ಕೂಟರ್ ಬ್ಯಾಟರಿ ಸಿಡಿದು ಬೆಂಕಿ ಹತ್ತಿರುವುದಾಗಿ ಶಂಕಿಸಲಾಗಿದೆ. ರಾಕೇಶ್ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.