ವಿಶ್ವದಲ್ಲಿ ಶಾಂತಿ ನೆಲೆಸಲು ಗಾಂಧಿಯ ಅಹಿಂಸಾ ಮಾರ್ಗ ಒಂದೇ ಪರಿಹಾರ: ನಿವೃತ್ತ ನ್ಯಾಯಾಧೀಶ ನಾಗಮೋಹನ್‌ದಾಸ್

ವಿಶ್ವದಲ್ಲಿ ಶಾಂತಿ ನೆಲೆಸಲು ಗಾಂಧಿಯ ಅಹಿಂಸಾ ಮಾರ್ಗ ಒಂದೇ ಪರಿಹಾರ: ನಿವೃತ್ತ ನ್ಯಾಯಾಧೀಶ ನಾಗಮೋಹನ್‌ದಾಸ್


ಮಂಗಳೂರು: ವಿಶ್ವದ ಹಲವು ರಾಷ್ಟ್ರಗಳು ಅಹಿಂಸೆಯ ತಾಣಗಳಾಗಿ ಪರಸ್ಪರ ಯುದ್ಧವನ್ನು ನಡೆಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ವಿಶ್ವದಲ್ಲಿ ಶಾಂತಿ ನೆಲೆಸಲು ಗಾಂಧಿಯ ಅಹಿಂಸೆಯ ಮಾರ್ಗವೇ ವಿಶ್ವದ ಎದುರಿರುವ ಪರಿಹಾರ ಮಾರ್ಗ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನಾಗಮೋಹನ್‌ದಾಸ್ ಅಭಿಪ್ರಾಯಿಸಿದ್ದಾರೆ.

ನಂತೂರಿನ ಸಿಒಡಿಪಿ ಸಭಾಂಗಣದಲ್ಲಿ ಬುಧವಾರ ರಾಕ್ಣೋ ವತಿಯಿಂದ ಇಂಡಿಯನ್ ಕೆಥೊಲಿಕ್ ಪ್ರೆಸ್ ಅಸೋಸಿಯೇಶನ್ (ಐಸಿಪಿಎ)ನ ಕ್ರಿಶ್ಚಿಯನ್ ಪತ್ರಕರ್ತರ ಪ್ರಶಸ್ತಿ ಕಾರ್ಯಕ್ರಮದ 29ನೆ ರಾಷ್ಟ್ರೀಯ ಸಮಾವೇಶದಲ್ಲಿ ‘ಗಾಂಧಿಯ ಪತ್ರಿಕೋದ್ಯಮ’ ವಿಷಯದಲ್ಲಿ ನಡೆದ ಚರ್ಚಾಗೋಷ್ಠಿಯಲ್ಲಿ ಅವರು ದಿಕ್ಸೂಚಿ ಭಾಷಣ ನೀಡಿದರು. 

ಭಾರತ ಸೇರಿದಂತೆ ವಿಶ್ವದ ಶ್ರೀಮಂತ ರಾಷ್ಟ್ರಗಳೂ ತಮ್ಮ ವಾರ್ಷಿಕ ಬಜೆಟ್‌ನ ಬಹುದೊಡ್ಡ ಪಾಲನ್ನು ರಕ್ಷಣೆಯ ಹೆಸರಿನಲ್ಲಿ ಶಸ್ತ್ರಗಳಿಗಾಗಿ ಮೀಸಲಿಡುವ ಮೂಲಕ ಸಾಮಾನ್ಯ ಜನರ ನಿರುದ್ಯೋಗ, ಹಸಿವು, ಶಿಕ್ಷಣ, ಆರೋಗ್ಯದಂತಹ ಬದುಕಿನ ಸಮಸ್ಯೆಗಳಿಂದ ವಿಮುಖವಾಗುತ್ತಿವೆ. ಹಿಂಸೆ ಇದ್ದಾಗ ಶಾಂತಿ ಅಸಾಧ್ಯ. ಶಾಂತಿ ಇಲ್ಲದಿದ್ದರೆ, ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವೇ ಇಲ್ಲ. ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಕಾನೂನು ಮೊದಲಾದ ವಿಭಿನ್ನ ರೀತಿಯ ಹಿಂಸೆಗಳು ಮತೀಯತೆ, ಉಗ್ರವಾದ, ಮೂಲಭೂತವಾದ, ಸಂಘಟಿತ ಅಪರಾಧ, ಶೋಷಣೆಗೆ ಕಾರಣವಾಗಿ ಕೊನೆಗೆ ಯುದ್ಧಕ್ಕೆ ನಾಂದಿ ಹಾಡುತ್ತದೆ. ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಅದನ್ನು ಕಾಣುತ್ತಿದ್ದೇವೆ ಎಂದವರು ಕಳವಳ ವ್ಯಕ್ತಪಡಿಸಿದರು. 

ಎರಡು ವಿಶ್ವ ಯುದ್ಧಗಳ ಪರಿಣಾಮವನ್ನು ನಾವು ಅರಿತಿದ್ದೇವೆ. ಮೂರನೆ ವಿಶ್ವ ಯುದ್ಧ ನಡೆದರೆ ಮಾನವ ಕುಲ, ಸಮಾಜವೇ ನಾಶವಾಗುತ್ತದೆ ಎಂಬುದನ್ನು ಅರಿತ ವಿಶ್ವ ನಾಯಕರು ರಾಷ್ಟ್ರಗಳ ನಡುವಿನ ಕಲಹಗಳನ್ನು ಮಾತುಕತೆಯ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ 1945ರಲ್ಲಿ ವಿಶ್ವಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದರು. ಆದರೆ, 2024ರ ನಡುವಿನ ದೀರ್ಘಾವಧಿಯಲ್ಲಿ ವಿಶ್ವವು 300ಕ್ಕೂ ಅಧಿಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಈಗಲೂ ಯುಕ್ರೇನ್-ರಷ್ಯಾ, ಸಿರಿಯಾ, ಲಿಬಿಯಾ, ಇರಾನ್‌ನಲ್ಲಿ ಯುದ್ಧಗಳು ನಡೆಯುತ್ತಿವೆ. ಯುದ್ಧಗಳಿಂದಾಗಿ ವಿಶ್ವದಲ್ಲಿ ವರ್ಷಕ್ಕೆ 1 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯರನ್ನು ಕೊಲ್ಲುವ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ, ಸಾಗಾಟ ಜತೆಗೆ ಅವುಗಳನ್ನು ಉಪಯೋಗಿಸಲು ತರಬೇತಿ ನೀಡುವುದು ವಿಶ್ವದ ಬೃಹತ್ ಉದ್ಯಮವಾಗಿದೆ. ನ್ಯೂಟ್ರಾನ್, ನ್ಯೂಕ್ಲಿಯರ್ ಬಾಂಬ್ಗಳ ಯುಗದಲ್ಲಿ ನಾವಿದ್ದು, ಭಾರತ ಮಾತ್ರವಲ್ಲದೆ, ವಿಶ್ವದ ಮುಂದಿರುವ ಬಹುದೊಡ್ಡ ಸವಾಲು ಯುದ್ಧವಾಗಿದೆ. ಜಾಗತಿಕ ನಾಯಕರು, ಶಾಂತಿದೂತರು ಈ ಯುದ್ಧವನ್ನು ತಡೆಗಟ್ಟಲು ವಿಫಲರಾಗುತ್ತಿದ್ದಾರೆ. ಸಣ್ಣ ರಾಷ್ಟ್ರಗಳು ಕೂಡಾ ಅಣು, ಪರಮಾಣು ಬಾಂಬ್ಗಳನ್ನು ಹೊಂದುವ ಮೂಲಕ ತಮ್ಮ ಎದುರಾಳಿ ಶ್ರೀಮಂತ ರಾಷ್ಟ್ರಗಳ ನಿದ್ದೆಗೆಡಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವವು ಮಹಾತ್ಮ ಗಾಂಧಿ ತೋರಿಸಿದ ಅಹಿಂಸಾ ಮಾರ್ಗವನ್ನು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದವರು ಹೇಳಿದರು. 

ಮಹಾತ್ಮ ಗಾಂಧಿಯವರು ತಮ್ಮ ಹತ್ಯೆಯ 75 ವರ್ಷಗಳ ಬಳಿಕವೂ, ಕೇವಲ ಭಾರತ ಮಾತ್ರವಲ್ಲ ವಿಶ್ವದ ಸಾಮಾನ್ಯ ಜನರ ಮೇಲೆ ಪ್ರಭಾವವನ್ನು ಬೀರಿದ್ದಾರೆ. ಹಾಗಾಗಿ ಗಾಂಧೀಜಿಯ ಕೆಲ ಅಸಮ್ಮತಿಯ ವಿಷಯಗಳ ಹೊರತಾಗಿಯೂ ನೂರಾರು ಅವರ ಸಮ್ಮತಿಯ ವಿಷಯಗಳನ್ನು ಅರಿಯಬೇಕಾದರೆ, ಗಾಂಧಿ ಬಗ್ಗೆ ವಿಮರ್ಶಾತ್ಮಕ ಅಧ್ಯಯನ ನಡೆಸಬೇಕು ಎಂದು ನ್ಯಾ. ನಾಗಮೋಹನ್ದಾಸ್ ಕರೆ ನೀಡಿದರು. 

ಚರ್ಚಾಗೋಷ್ಠಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ. ಎಚ್.ಎಸ್. ಅನುಪಮಾ, ಸೆಡ್ರಿಕ್ ಪ್ರಕಾಶ್ ವಿಷಯ ಮಂಡಿಸಿದರು. 

ಐಸಿಪಿಎ ಅಧ್ಯಕ್ಷ ಇಗ್ನೇಶಿಯಸ್ ಗೊನ್ಸಾಲ್ವಿಸ್ ಚರ್ಚಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಫಾ. ಸುರೇಶ್ ಮ್ಯಾಥ್ಯೂರವರು ತುಷಾರ್ ಗಾಂಧಿಯವರು ಕಳುಹಿಸಿದ್ದ ಸಂದೇಶವನ್ನು ಓದಿದರು. ಐಸಿಪಿಎ ಮುಂಬೈನ ಸಂಪಾದಕ ಜೋಶನ್ ರಾಡ್ರಿಗಸ್ ಚರ್ಚಾಗೋಷ್ಠಿಯನ್ನು ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article