ಪಂಚಾಯತ್ ನೌಕರರಿಗೆ ಅಭಿನಂದನಾ ಕಾರ್ಯಕ್ರಮ
Tuesday, October 1, 2024
ಮೂಡುಬಿದಿರೆ: ಗ್ರಾಮೀಣಾಭಿವೃದ್ದ್ಇ ಮತ್ತು ಪಂಚಾಯತ್ ರಾಜ್ ಇಲಾಖೆ, ಟೀಮ್ ಮೂಡುಬಿದಿರೆ ತಾಲೂಕು ಗ್ರಾಮ ಪಂಚಾಯತ್ ನೌಕರರ ಸಂಘ ಮೂಡುಬಿದಿರೆ ಇದರ ಸಭೆ ಹಾಗೂ ಪಂಚಾಯತ್ ನೌಕರರರಾಗಿ ಸೇವಾ ನಿವೃತ್ತಿ ಹೊಂದಿದ ಪಾಲಡ್ಕ ಪಂಚಾಯತ್ ನ ಹರೀಶ ಶೆಟ್ಟಿ ಅವರಿಗೆ ಮತ್ತು ಪಂಚಾಯತ್ ನೌಕರರಿಂದ ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿರುವ ಶಿರ್ತಾಡಿ ಪಂಚಾಯತ್ ನ ಯಶೋಧರ ಅವರಿಗೆ ಅಭಿನಂದನಾ ಸಭೆಯು ಸಮಾಜ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಅವರು ಭಾಗವಹಿಸಿ ಈರ್ವರನ್ನು ಅಭಿನಂದಿಸಿ ಮಾತನಾಡಿ, ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟ ಕಡೆಯ ಗ್ರಾಮೀಣ ಪ್ರದೇಶದ ಕಡು ಬಡವರಿಗೆ ತಲುಪಿಸುವಲ್ಲಿ ಪಂಚಾಯತ್ ನೌಕರರ ಪಾತ್ರ ಪ್ರಮುಖವಾದುದು. ಅತ್ಯಲ್ಪ ವೇತನ ಪಡೆದು ಯಾವುದೇ ಭದ್ರತೆ ಇಲ್ಲದೇ ಸ್ವಚ್ಚ ಮನಸ್ಸಿನಿಂದ ದೇವರ ಕೆಲಸ ಎಂಬ ಮನೋಭಾವನೆಯಿಂದ ದುಡಿಯುವ ನೌಕರರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಸರಕಾರವು ನೌಕರರಿಗೆ ಭವಿಷ್ಯ ನಿಧಿ ಇ.ಎಸ್.ಐ. ಮುಂತಾದ ಭದ್ರತಾ ಯೋಜನೆಗಳನ್ನು ನೀಡಬೇಕು.
ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಹೆಚ್ಚಿನ ಜವಾಬ್ದಾರಿಯುತ ಕೆಲಸ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಒಂದು ಒಳ್ಳೆಯ ವೇತನ ಶ್ರೇಣಿ ನಿಗದಿಪಡಿಸಿ ನೀಡಬೇಕು ಇದರಿಂದ ಕುಟುಂಬ ನಿರ್ವಹಣೆಗೆ ಸಾಧ್ಯ ಎಂದು ಹೇಳುತ್ತಾ ನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಾಂಗದ ಎಲ್ಲಾ ವಿಧಗಳ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿ ಅರಿತ ಪಂಚಾಯತ್ ನೌಕರರ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ಮಾಧ್ಯಮದ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ನೌಕರರ ಸಂಘದ ಅಧ್ಯಕ್ಷೆ ನಯನ ಅಧ್ಯಕ್ಷತೆಯನ್ನು ವಹಿಸಿದ್ದರು.
ನೌಕರರು ಎದುರಿಸುತ್ತಿರುವ ಬವಣೆಗಳ ಕುರಿತಾಗಿ ಪುತ್ತಿಗೆ ಗ್ರಾಮ ಪಂಚಾಯತ್ ನ ಸಂಜೀವ ನಾಯ್ಕ ಮತ್ತು ಹೊಸಬೆಟ್ಟು ಗ್ರಾಮ ಪಂಚಾಯತ್ ನ ಗಣೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ ಪತ್ರವನ್ನು ಬೆಳುವಾಯಿ ಪಂಚಾಯತ್ ರಕ್ಷಿತಾ ಮತ್ತು ಪಡುಮಾರ್ನಾಡ್ ಪಂಚಾಯತ್ ರಾಜು ಅವರು ವಾಚಿಸಿದರು.
ಸಭಾ ವೇದಿಕೆಯಲ್ಲಿ ನೌಕರರ ಸಂಘದ ಉಪಾಧ್ಯಕ್ಷ ಗಿರಿಜಾ ಉಪಸ್ಥಿತರಿದ್ದರು.
ತೆಂಕ ಮಿಜಾರು ಗ್ರಾ.ಪಂ.ನ ರಾಕೇಶ್ ಸ್ವಾಗತಿಸಿದರು. ನೆಲ್ಲಿಕಾರು ಗ್ರಾ.ಪಂ.ನ ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ, ಕಿಶೋರ್ ಪಡುಮಾರ್ನಾಡ್ ವಂದಿಸಿದರು. ತಾಲೂಕು ವ್ಯಾಪ್ತಿಯ 12 ಪಂಚಾಯತ್ ಗಳ ನೌಕರರು ಉಪಸ್ಥಿತರಿದ್ದರು.