ಕಸ್ತೂರಿ ರಂಗನ್ ವರದಿ ಗೊಂದಲ ನಿವಾರಿಸಿ: ಹಳ್ಳಿಹೊಳೆ ಗ್ರಾಮ ಹಿತರಕ್ಷಣಾ ಸಮಿತಿ ಆಗ್ರಹ
Tuesday, October 1, 2024
ಉಡುಪಿ: ಕಸ್ತೂರಿ ರಂಗನ್ ವರದಿ ಜಾರಿಗೆ ಮುಂಚೆ ಜನರ ವಿಶ್ವಾಸ ಪಡೆದು ಗೊಂದಲ ನಿವಾರಿಸಬೇಕು ಎಂದು ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ನೀಡಿ, ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಶೆಟ್ಟಿ ಹಾಗೂ ಮಾಜಿ ಅಧ್ಯಕ್ಷ ಪ್ರದೀಪ್ ಕೊಠಾರಿ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದ ಸುಮಾರು 4,358 ಎಕರೆ ಭೂಮಿ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ.
ಆ ಪ್ರಕಾರ ಹಳ್ಳಿಹೊಳೆ ಗ್ರಾಮದ 7,240.50 ಎಕರೆ ಭೂಮಿಯನ್ನು ಪರಿಸರ ಸೂಕ್ಷ್ ಪ್ರದೇಶ (ಜನವಸತಿ ಪ್ರದೇಶ)ದಿಂದ ಮ್ಯಾನುವಲ್ ಸರ್ವೇ ಮಾಡಿ ಕೈಬಿಡುವ ಕುರಿತು ಸೆ.25ರಂದು ನಡೆದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದವರು ತಿಳಿಸಿದರು.
ಯೋಜನೆ ಜಾರಿಗೂ ಮುನ್ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರಲ್ಲಿ ಇರುವ ಗೊಂದಲ ಪರಿಹರಿಸಬೇಕು ಎಂದವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಪ್ರಭಾಕರ್ ನಾಯ್ಕ್, ಜಯರಾಮ್ ಪೂಜಾರಿ, ಸುರೇಶ್ ಪೂಜಾರಿ, ಸುಜಾತ ಭೋವಿ, ನೇತ್ರಾವತಿ ಉಪಸ್ಥಿತರಿದ್ದರು.