ಬೊಲ್ಲೊಟ್ಟು ಸಂಪರ್ಕ ಸೇತುವೆ ನಿರ್ಮಾಣ ಪ್ರದೇಶಕ್ಕೆ ಉದಯ್ ಶೆಟ್ಟಿ ಭೇಟಿ
Saturday, November 30, 2024
ಬೊಲ್ಲೊಟ್ಟು ಸಂಪರ್ಕ ಸೇತುವೆ ನಿರ್ಮಾಣ ಪ್ರದೇಶಕ್ಕೆ ಉದಯ್ ಶೆಟ್ಟಿ ಭೇಟಿ
ಕಾರ್ಕಳ: ನಕ್ಸಲ್ ಪ್ರದೇಶ ಈದು ಬೊಲ್ಲೊಟ್ಟುಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ 50:50ರ ಅಡಿಯಲ್ಲಿ ೪ ಕೋಟಿ ರೂ. ಮಂಜೂರಾಗಿದ್ದು, ಸೇತುವೆ ನಿರ್ಮಾಣಗೊಳ್ಳಲಿರುವ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2003ರ ನ.17ರಂದು ಈದು ಬೊಲ್ಲೊಟ್ಟುನಲ್ಲಿ ರಾಜ್ಯದ ಪ್ರಥಮ ನಕ್ಸಲ್ ಎನ್ಕೌಂಟರ್ ನಡೆದಿತ್ತು. ಪಲ್ಗುಣಿ ನದಿ ದಾಟಲು ಸೇತುವೆಯ ಬೇಡಿಕೆಯನ್ನು ಆ ಭಾಗದ ಜನತೆ ಮುಂದಿಟ್ಟಿದ್ದರು. ಆದರೆ ಎನ್ಕೌಂಟರ್ ನಡೆದ 21 ವರ್ಷಗಳಿಂದ ಆ ಬೇಡಿಕೆ ಈಡೇರಲಿಲ್ಲ. ಸ್ಥಳೀಯ ಕುಟುಂಬಗಳು ಪ್ರತೀ ವರ್ಷ ಮಳೆಗಾಲದಲ್ಲಿ ಸುತ್ತುವರೆದು ಅತ್ತಿತ್ತ ಸಂಪರ್ಕ ಕಲ್ಪಿಸುತ್ತಿದ್ದರು. ಆದರೆ ಈ ಬಾರಿ ಸೇತುವೆ ನಿರ್ಮಾಣಕ್ಕೆ ಸರಕಾರ ಹಣ ಮಂಜೂರಾತಿಗೊಳಿಸಿದೆ.
ಪ್ರಯತ್ನ ನಡೆಸುತ್ತೇನೆ: ಉದಯ ಶೆಟ್ಟಿ
ಈದು ಬೊಲ್ಲೊಟ್ಟು ಕುಗ್ರಾಮವಾಗಿಯೇ ಉಳಿಯಬಾರದು. ಅಲ್ಲಿನ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಯತ್ನ ನಡೆಸುತ್ತೇನೆ. ಪ್ರಸಕ್ತ ಸಾಲಿನಲ್ಲಿ ಸೇತುವೆ ನಿರ್ಮಾಣಕ್ಕೆ ಸರಕಾರ ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗೂ ಸರಕಾರದಿಂದ ಅನುದಾನ ಒದಗಿಸುವ ಪ್ರಯತ್ನ ನಡೆಸುತ್ತೇನೆ. ಬೊಲ್ಲೊಟ್ಟು ಪ್ರಶಾಂತ ಪೂಜಾರಿ ಅವರ ಮನೆಯಲ್ಲಿ ನಕ್ಸಲ್ ಎನ್ಕೌಂಟರ್ ನಡೆದು ೨೧ ವರ್ಷ ಸಂದರೂ, ಸರಕಾರದಿಂದ ಮನೆ ನಿರ್ಮಾಣಕ್ಕೆ ಪರಿಹಾರ ಸಿಕ್ಕಿಲ್ಲ. ಅವರು ಸಾಲ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ. ಅವರಿಗೆ ಪರಿಹಾರಧನ ಒದಗಿಸಿಕೊಡಬೇಕೆನ್ನುವ ಬೇಡಿಕೆಯನ್ನು ಅವರು ಈ ಸಂದರ್ಭ ಇಟ್ಟಿದ್ದಾರೆ. ಅವರ ಬೇಡಿಕೆಗೆ ಅನುಗುಣವಾಗಿ ಸರಕಾರದಿಂದ ಅಥವಾ ನನ್ನ ವೈಯಕ್ತಿಕ ನೆಲೆಯಲ್ಲಿ ಸಹಕರಿಸುವ ಪ್ರಯತ್ನ ಮಾಡುತ್ತೇನೆ ಎಂದು ಈ ಸಂದರ್ಭ ಭರವಸೆ ನೀಡಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಾನು ಭಾಸ್ಕರ್, ಈದು ಗ್ರಾ.ಪಂ.ಅಧ್ಯಕ್ಷ ಸದಾನಂದ ಪೂಜಾರಿ, ಜ್ವಾಲಪ್ರಸಾದ್, ಸುರೇಶ್ ಆಚಾರ್ಯ, ಶ್ರೀಧರ್ ಭಟ್, ರಘರಾಮ್ ಭಟ್, ಸುದೀರ್ ಶೆಟ್ಟಿ, ಜಗನ್ನಾಥ್ ಶೆಟ್ಟಿ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
