ಕಿರು ಸೇತುವೆ ಸಂಚಾರ ನಿರ್ಬಂಧ: ನ.13ರಂದು ಪ್ರತಿಭಟನೆ

ಕಿರು ಸೇತುವೆ ಸಂಚಾರ ನಿರ್ಬಂಧ: ನ.13ರಂದು ಪ್ರತಿಭಟನೆ


ಮಂಗಳೂರು: ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲೆ ಮೇಲ್ಮನೆ ಎಂಬಲ್ಲಿ ಕಿರು ಸೇತುವೆ ಸಂಚಾರ ನಿರ್ಬಂಧ ಸಂಬಂಧಿಸಿ ನ.13ರಂದು ಬೆಳಗ್ಗೆ 10.30ಕ್ಕೆ ರಾಷ್ಟ್ರೀಯ ಹೆದ್ದಾರಿ 169ರ ಪರಾರಿಯಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಸಲಾಗುವುದು ಎಂದು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು ತಿಳಿಸಿದರು. 

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೇತುವೆ ಶಿಥಿಲಗೊಂಡಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಘನ ವಾಹನ ಸಂಚಾರ ನಿಷೇಧಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಕಿರುಸೇತುವೆ ಸಮೀಪ ತಾತ್ಕಾಲಿಕ ರಸ್ತೆ ನಿರ್ಮಾಣದ ಬೇಡಿಕೆ ಬಗ್ಗೆ ಮೂರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ, ಸ್ಪಂದನೆ ಸಿಕ್ಕಿಲ್ಲ. ಆ ಕಾರಣ ಪ್ರತಿಭಟನೆ ಅನಿವಾರ್ಯ ಎಂದು  ಹೇಳಿದರು. 

ಉಳಾಯಿಬೆಟ್ಟು -ಪೆರ್ಮಂಕಿ, ಮಲ್ಲೂರು, ಬಿಸಿರೋಡ್, ಅರ್ಕುಳ, ಅಡ್ಯಾರ್ಗೆ ರಾಷ್ಟ್ರೀಯ ಹೆದ್ದಾರಿ 169ರಿಂದ ನೇರ ಸಂಪರ್ಕ ಹೊಂದಿರುವ ಈ ಕಿರುಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಗೊಳಿಸಲಾಗಿದೆ. ಇದರಿಂದಾಗಿ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ಧರ ಪ್ರಯಾಣ ಕಷ್ಟದಾಯವಾಗಿದೆ. ಕಿರು ಸೇತುವೆಯಲ್ಲಿ ವಾಹನ ಸಂಚಾರ ನಿಷೇಧದ ಬಳಿಕ ಈ ಮಾರ್ಗದಲ್ಲಿ ಕೆಎಸ್‌ಆರ್ಟಿಸಿ ಮತ್ತು ಖಾಸಗಿ ಹಾಗೂ ಶಾಲಾ ಕಾಲೇಜು ಬಸ್ಗಳು ಸುತ್ತು ಬಳಸಿ ತೆರಳುತ್ತಿವೆ. ಇದರಿಂದ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಗಮ್ಯಸ್ಥಾನ ತಲುಪಲಾಗುತ್ತಿಲ್ಲ ಎಂದು ಹೇಳಿದರು. 

ಕಿರುಸೇತುವೆ ಸಮೀಪ ಖಾಸಗಿ ಜಾಗದಲ್ಲಿ ತಾತ್ಕಾಲಿನ ಮಣ್ಣಿನ ರಸ್ತೆ ನಿರ್ಮಿಸಲು ಜಾಗದ ಮಾಲಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಕಾರಿ ಅವರನ್ನು ಭೇಟಿಯಾಗಿ ವಿವರಿಸಲಾಗಿದೆ. ಆದರೆ, ಜಿಲ್ಲಾಡಳಿತದಿಂದ ಪರ್ಯಾಯ ರಸ್ತೆ ಬಗ್ಗೆ ಯಾವುದೇ ಉತ್ತರ ಬಂದಿಲ್ಲ. ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು ಭಾಗದಿಂದ ವಿವಿಧ ಕಡೆ ತೆರಳುವ 350ಕ್ಕೂ ಅಧಿಕ ವಿದ್ಯಾರ್ಥಿಗಳು ಈಗ ತೊಂದರೆಗೀಡಾಗಿದ್ದಾರೆ. 20 ಕಿ.ಮೀ. ಸುತ್ತು ಬಳಸಿ ಮಂಗಳೂರಿಗೆ ಪ್ರಯಾಣಿಸಬೇಕಿದೆ. ಆಟೋರಿಕ್ಷಾಕ್ಕೆ 150 ರೂ. ಬಾಡಿಗೆ ಇದೆ. ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಗಮನಕ್ಕೂ ತಂದಿದ್ದೇವೆ. ಪರ್ಯಾಯ ರಸ್ತೆ ಬಗ್ಗೆ ನ.12ರೊಳಗೆ ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ನ.13ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿವರಿಸಿದರು. 

ಘನ ವಾಹನ ಸಂಚಾರ ನಿಷೇಧಗೊಂಡಿರುವ ಕಿರು ಸೇತುವೆಯ ಬದಿಯಲ್ಲಿ ನಿರ್ಮಿಸಿದ ಕಮಾನು ಬಿದ್ದಿದೆ. ಕಿರುಸೇತುವೆ ಘನ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಕಲ್ಲು, ಮರಳು ಹೊತ್ತ ಲಾರಿಗಳು ಈ ಕಿರುಸೇತುವೆಯಲ್ಲಿ ಈಗಲೂ ಸಂಚರಿಸುತ್ತಿವೆ. ಈ ಬಗ್ಗೆ ಸ್ಥಳೀಯ ಜನತೆ, ಕೂಲಿ ಕಾರ್ಮಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. 

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕುಮಾರ್, ಸದಸ್ಯ ವಿಶ್ವನಾಥ ಶೆಟ್ಟಿ, ಪ್ರಮುಖರಾದ ಇಸ್ಮಾಯಿಲ್, ಮಹಮ್ಮದ್ ಶರೀಫ್, ದಿನೇಶ್ ಕಲ್ಲಿಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article