
ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್: ದೂರು ದಾಖಲು
ಮಂಗಳೂರು ನಗರದ ಹೊರವಲಯದ ಮುಕ್ಕದಲ್ಲಿರುವ ಶ್ರೀನಿವಾಸ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಯೋರ್ವನಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಕ್ಕದ ಶ್ರೀನಿವಾಸ ಕಾಲೇಜಿನಲ್ಲಿ ಮೊದಲನೇ ವರ್ಷದ ಕ್ಲೀನಿಕಲ್ ಸೈಕಾಲಜಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಲಾಗಿದೆ.
ನವೆಂಬರ್ 25ರಂದು ಶ್ರೀನಿವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಸಿದಾಯತ್ ಲೋಕೇಶನ್ ಕಳುಹಿಸಿ, ಅಲ್ಲಿಗೆ ಬರುವಂತೆ ಕಿರಿಯ ವಿದ್ಯಾರ್ಥಿಗೆ ಹೇಳಿದ್ದಾನೆ. ಅದರಂತೆ ಕಿರಿಯ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಬಂದಿದ್ದಾನೆ. ಲೊಕೇಶನ್ ಆಧಾರಿಸಿ ಆತನ ಬಾಡಿಗೆ ಕೊಠಡಿಯೊಂದಕ್ಕೆ ಬಂದಿದ್ದಾರೆ. ಆಗ ಅಲ್ಲಿದ್ದ ಸಿದಾಯತ್, ಅಮಲ್ ಕೃಷ್ಣ, ಹಾಗೂ ಸಾಜೀದ್ ಎಂಬವರು ಕಿರಿಯ ವಿದ್ಯಾರ್ಥಿಗೆ ಅವಾಚ್ಯ ಶಬ್ದಗಳಿಂದ ಬೈದು ಸಿದಾಯತ್ ಕೊಠಡಿ ಬಾಗಿಲನ್ನು ಮುಚ್ಚಿದ್ದಾನೆ. ಬಳಿಕ ಕಿರಿಯ ವಿದ್ಯಾರ್ಥಿಗೆ ಹಾಡಲು ಮತ್ತು ಕುಣಿಯಲು ಒತ್ತಾಯ ಮಾಡಿ ರ‍್ಯಾಗಿಂಗ್ ಮಾಡಿದ್ದಾರೆ.
ವಿದ್ಯಾರ್ಥಿಗೆ ಹಾಡಲು ಮತ್ತು ಕುಣಿಯಲು ಒತ್ತಾಯಮಾಡಿ ರ‍್ಯಾಗಿಂಗ್ ಮಾಡಿದ್ದಾರೆ. ಅದಕ್ಕೆ ಪ್ರತಿರೋಧ ಒಡ್ಡಿದಾಗ ಸಿದಾಯತ್, ಅಮಲ್ ಕೃಷ್ಣ ಹಾಗೂ ಸಾಜೀದ್ ಕೆನ್ನೆಗೆ ಹೊಡೆದಿದ್ದಾರೆ. ಆಗ ಅಲ್ಲಿಗೆ ಶಿಬಿನ್, ಅಜೀಮ್ ಶಾ, ಆಡಮ್, ಫಹಾದ್, ಅತುಲ್ ಕೆ., ದಿಲೀಪ್ ಹಾಗೂ ಅಬ್ಬಲ್ ಎಂಬವರು ಬಂದಿದ್ದು ನೀವುಗಳು ಕಾಲೇಜು ಮಂಡಳಿ ಹಾಗೂ ಪೊಲೀಸರಿಗೆ ದೂರನ್ನು ನೀಡಿದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿದ್ದಾರೆ.
ಕಿರಿಯ ವಿದ್ಯಾರ್ಥಿ ರೂಮ್‌ನಿಂದ ಮನೆಗೆ ಬಂದು ರಾತ್ರಿ ಭಯದಿಂದ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಆತನ ಎಡಕಿವಿಯಲ್ಲಿ ರಕ್ತ ಬಂದಿದ್ದು ಕಾಲೇಜಿನಲ್ಲಿರುವ ಆಸ್ಪತ್ರೆಯಲ್ಲಿ ಈ ಬಗ್ಗೆ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ವಿದ್ಯಾರ್ಥಿ ಕಾಲೇಜಿನ ಡೀನ್ ಹಾಗೂ ಆ್ಯಂಟಿ ರ‍್ಯಾಗಿಂಗ್ ಕಮಿಟಿಗೆ ದೂರು ನೀಡಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.