
ಶ್ರೀನಿವಾಸ ಮಲ್ಯರ ಪ್ರತಿಮೆ ಸ್ಥಳಾಂತರಕ್ಕೆ ಪರ್ಯಾಯ ಜಾಗ ಗುರುತಿಸುವಂತೆ ಕಾಂಗ್ರೆಸ್ ಆಗ್ರಹ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನಂತೂರಿನಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಮಂಗಳೂರಿನ ನಿರ್ಮಾತೃ, ಇಲ್ಲಿನ ಪ್ರಥಮ ಸಂಸದ ಶ್ರೀನಿವಾಸ ಮಲ್ಯರ ಪ್ರತಿಮೆ ಸ್ಥಳಾಂತರಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ನಿರ್ಧರಿಸಿದೆ. ಆದರೆ ಪರ್ಯಾಯ ಜಾಗ ಗುರುತಿಸಿದ ಬಳಿಕವೇ ಪ್ರತಿಮೆ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಮಾಜಿ ಶಾಸಕ ಜೆ.ಆರ್.ಲೋಬೋ ಶನಿವಾರ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆಗ್ರಹ ಮಾಡಿದರು.
ಅಭಿವೃದ್ಧಿ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಆದರೆ ದ.ಕ.ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ, ಸಂಸದರಾಗಿ ಇಡೀ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಶ್ರೀನಿವಾಸ ಮಲ್ಯರ ಪ್ರತಿಮೆ ಸ್ಥಳಾಂತರಿಸಿ ಅಗೌರವ ತೋರಿಸಿದರೆ ನಾವು ಸುಮ್ಮನಿರುವುದಿಲ್ಲ. ಪರ್ಯಾಯ ಜಾಗ ಗುರುತಿಸಿ, ಅಲ್ಲಿ ಗೌರವಯುತವಾಗಿ ಪ್ರತಿಮೆ ಮರು ಸ್ಥಾಪಿಸಬೇಕು. ಇಲ್ಲದಿದ್ದರೆ ಪಂಪ್‌ವೆಲ್‌ನಲ್ಲಿ ಕಲಶ ಸ್ಥಳಾಂತರಿಸಿ ಬಳಿಕ ಜೈನ ಸಮುದಾಯಕ್ಕೆ ಅವಮಾನ ಮಾಡಿದಂತಾಗುತ್ತದೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ, ತಪ್ಪಿದಲ್ಲಿ ಪ್ರತಿಭಟನೆ ನಡೆಸಲು ಸಿದ್ಧ ಎಂದು ಅವರು ಹೇಳಿದರು.
ಶ್ರೀನಿವಾಸ ಮಲ್ಯರ ಪ್ರತಿಮೆ ಸ್ಥಳಾಂತರ ಅನಿವಾರ್ಯ ಎಂದು ಎನ್‌ಎಚ್‌ಎಐ ಅಧಿಕಾರಿಗಳು ನಮ್ಮಲ್ಲಿ ಹೇಳಿದ್ದಾರೆ. ಆದರೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಹೇಳುತ್ತಿಲ್ಲ ಎಂದರು.
ಎಡಪಕ್ಷಗಳ ಪ್ರತಿಭಟನೆಗೆ ಮಂಗಳೂರಿನಲ್ಲಿ ಪೊಲೀಸರು ಅವಕಾಶ ನಿರಾಕರಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವನ್ನು ಎಡಪಕ್ಷಗಳ ಮುಖಂಡ ಮುನೀರ್ ಕಾಟಿಪಳ್ಳ ಅವರು ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ. ಎಡಪಕ್ಷಗಳು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ ಕಾರಣ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ನಂತೆ ಮಂಗಳೂರಲ್ಲೂ ಮಿನಿ ವಿಧಾನಸೌಧ ಎದುರು ಅಥವಾ ಗಾಂಧಿ ಪ್ರತಿಮೆ ಬಳಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ. ಹೊರಗಡೆ ನೀಡಿದರೆ, ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕರಿಸುತ್ತಿದ್ದಾರೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹೊರಗಡೆ ಪ್ರತಿಭಟನೆಗೆ ಅವಕಾಶ ನೀಡುವುದಿದ್ದರೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದರು.
ಮುಖಂಡರಾದ ಅಪ್ಪಿ, ಸುಧೀರ್ ಕೆ.ಟಿ., ರಮಾನಂದ, ಸುಬೋದಯ, ಸಮರ್ಥ, ಮಂಜುಳಾ ನಾಯಕ್, ನಝೀರ್ ಬಜಾಲ್ ಇದ್ದರು.