
ಪೊಲೀಸ್ ಆಯುಕ್ತರ ವರ್ಗಾವಣೆಗೆ ಸಿಪಿಎಂ ಗೃಹ ಸಚಿವರಿಗೆ ಮನವಿ
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದೆ.
ನಗರದಲ್ಲಿಂದು ಗೃಹಸಚಿವರನ್ನು ಭೇಟಿಯಾದ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ನೇತೃತ್ವದ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಕೋಮು ಶಕ್ತಿಗಳಿಗೆ ಮುಕ್ತ ಅವಕಾಶ ಕೊಟ್ಟು, ಜಾತ್ಯತೀತ, ಜನಪರ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಜನಪರ ಸಂಘಟನೆಗಳು ಹಮ್ಮಿಕೊಳ್ಳುವ ಬೇಡಿಕೆ ಆಧಾರಿತ ಧರಣಿ, ಪ್ರತಿಭಟನೆಗಳನ್ನು ತಡೆಯುವುದು, ಮುಖಂಡರ ಮೇಲೆ ಮೊಕದ್ದಮೆ ಹೂಡುವುದು ಮಾಡುತ್ತಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರು ಎಡಪಕ್ಷಗಳು, ಜನಪರ, ಜಾತ್ಯತೀತ ಸಂಘಟನೆಗಳು, ಜನಸಾಮಾನ್ಯರ ಬೇಡಿಕೆಗಳ ಮೇಲಿನ ಪ್ರತಿಭಟನೆಗಳ ಕುರಿತು ಅಸಹನೆ ಹೊಂದಿದ್ದಾರೆ. ಜನ ಸಾಮಾನ್ಯರ, ನೊಂದವರ ಸಮಸ್ಯೆಗಳನ್ನು ಇಟ್ಟು ಕೊಂಡು ನಡೆಸುವ ಧರಣಿ, ಪ್ರತಿಭಟನೆಗಳಿಗೆ ಅನುಮತಿ ನೀಡದೆ ಸತಾಯಿಸುತ್ತಾರೆ. ಭೇಟಿಗೆ ಹೋದರೆ ಅನಗತ್ಯವಾಗಿ ತಾಸುಗಟ್ಟಲೆ ಕಾಯಿಸುತ್ತಾರೆ. ಅದೇ ಸಂದರ್ಭ, ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋಮುಶಕ್ತಿಗಳ ಚಟುವಟಿಕೆಗಳಿಗೆ, ನಿಯಮ ಉಲ್ಲಂಘನೆಯ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿದ್ದಾರೆ ಎಂದು ದೂರಿದ್ದಾರೆ.
ಪೊಲೀಸ್ ಆಯುಕ್ತರ ವಿರುದ್ಧ ತನಿಖೆಗೆ ಆದೇಶಿಸಬೇಕು, ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು, ಮಂಗಳೂರು ನಗರದಿಂದ ಅವರನ್ನು ತಕ್ಷಣದಿಂದಲೇ ವರ್ಗಾಯಿಸಬೇಕು, ದಕ್ಷ, ಪ್ರಾಮಾಣಿಕ ಅಧಿಕಾರಿಯೋರ್ವರನ್ನು ಮಂಗಳೂರಿಗೆ ಪೊಲೀಸ್ ಆಯುಕ್ತರನ್ನಾಗಿ ನೇಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.