ಕೆರೆಯ ಸೌದರ್ಯವನ್ನು ಹಾಳು ಮಾಡುತ್ತಿರುವ ಖಾಸಗಿಯವರು: ಸರಕಾರಿ ಸ್ವತ್ತಿಗೆ ಹಾನಿ
ಮಂಗಳೂರು: ನಗರದ ಪಡೀಲ್ ಬಳಿ ಇರುವ ಭೈರಾಡಿ ಕೆರೆ ಅದರ ಆಜು ಬಾಜುವಿನಲ್ಲಿರುವ ಕೆಲವು ಮನೆಗಳ ಅಕ್ರಮ ನಿರ್ಮಾಣದಿಂದಾಗಿ ನಲುಗಿ ಹೋಗಿದೆ. ಕೆರೆಯ ಅಂಗಳಕ್ಕೆ ಹಾಕಿದ್ದ ಇಂಟರ್ ಲಾಕ್ ಎದ್ದು ಹೋಗಿದೆ. ಕೆರೆಯ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಕಾಮಗಾರಿಗಾಗಿ ಖಾಸಗಿಯವರು ಧ್ವಂಸ ಮಾಡಿದ್ದಾರೆ.
ಕುಳಿತುಕೊಳ್ಳಲೆಂದು ಹಾಕಿದ್ದ ಬೆಂಚುಗಳ ಮೇಲೆ ಧೂಳು ರಾಜ್ಯಭಾರ ಮಾಡುತ್ತಿದೆ. ನೆಟ್ಟ ಗಿಡಗಳ ಮೇಲೆ ಮಣ್ಣು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸುರಿದು ಧ್ವಂಸ ಮಾಡಲಾಗಿದೆ. ಇದು ಸುಮಾರು ಎರಡು ಕೋಟಿ ರೂ.ಗಿಂತಲೂ ಹೆಚ್ಚು ಸರಕಾರದ ಹಣ ಖರ್ಚು ಮಾಡಿ ಪುನರುಜ್ಜೀವನ ಮಾಡಿದ ಭೈರಾಡಿ ಕೆರೆಯನ್ನು ಇಲ್ಲಿಯ ಅಕ್ರಮ ನಿರ್ಮಾಣಕಾರರು ರಾಡಿ ಎಬ್ಬಿಸುತ್ತಿರುವ ಕಥಾನಕ.
ಕಳೆದ ಶತಮಾನದಂಚಿನಲ್ಲಿ ವಿಸ್ತಾರವಾಗಿದ್ದ ಭೈರಾಡಿ ಕೆರೆಯನ್ನು ಅಕ್ಕಪಕ್ಕದವರು ಒತ್ತುವರಿ ಮಾಡಿದ ಬಳಿಕ ಅಳಿದುಳಿದ ಕೆರೆಯ ಪ್ರದೇಶವನ್ನು ಉಳಿಸಿಕೊಳ್ಳುವ ಇರಾದೆಯಿಂದ ಭೈರಾಡಿ ಕೆರೆ ಉಳಿಸಿ ಆಂದೋಲನ ಶುರುವಾಗಿತ್ತು. ಇದರ ಪರಿಣಾಮ ಕೆರೆಯಲ್ಲಿ ಮೀನು ಹಿಡಿಯುವ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆಯಲಾಗಿತ್ತು.
ಡಾ. ಅಣ್ಣಯ್ಯ ಕುಲಾಲ್ ಮತ್ತು ನಗರದ ಪರಿಸರ ಪ್ರೇಮಿಗಳು ಕೆರೆ ರಕ್ಷಿಸಿ ಆಂದೋಲನಕ್ಕೆ ಬಲ ತುಂಬಿದ್ದರು. ಇದಕ್ಕೆ ಮಣಿದ ಆಡಳಿತ ಅಳಿದುಳಿದ ಕೆರೆಯ ಭಾಗಗಳ ರಕ್ಷಣೆಗೆ ಮುಂದಾಗಿತ್ತು. ಅಂದಾಜು ಎರಡು ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವಿನಿಯೋಗಿಸಿ ಕೆರೆಯನ್ನು ಸುಂದರಗೊಳಿಸಲಾಗಿತ್ತು. ಆವರಣ ಗೋಡೆಯನ್ನು ನಿರ್ಮಿಸಿ ಭೂಗಳ್ಳರಿಂದ ರಕ್ಷಿಸುವ ಕೆಲಸ ಮಾಡಲಾಗಿತ್ತು.
ಕೆರೆಯ ಸುತ್ತ ದೀಪಗಳನ್ನು ಅಳವಡಿಸಿ ವಾಯು ವಿಹಾರಕ್ಕೆ ಅನುಕೂಲಕರವನ್ನಾಗಿ ಮಾಡಲಾಗಿತ್ತು. ವಿಶ್ರಮಿಸಿಕೊಳ್ಳಲು ಬೆಂಚುಗಳನ್ನು ಹಾಕಲಾಗಿತ್ತು. ಪ್ರವೇಶದ್ವಾರದಲ್ಲಿ ಗೇಟ್ ಅಳವಡಿಸಲಾಗಿತ್ತು. ಆದರೆ ಇದರ ಅಂಚಿನಲ್ಲಿ ಮನೆಗಳನ್ನು ಹೊಂದಿರುವವರಿಗೆ ನಡೆದಾಡಲು ಅವಕಾಶ ನೀಡುವ ಕಾರಣಕ್ಕಾಗಿ ಪ್ರವೇಶದ್ವಾರದಲ್ಲಿರುವ ದೊಡ್ಡ ಗೇಟಿಗೆ ಬೀಗ ಹಾಕುತ್ತಿರಲಿಲ್ಲ. ಇದರ ಪರಿಣಾಮವಾಗಿ ಮೊದಲು ಕೆರೆಯ ಸಂರಕ್ಷಿತ ಅಂಗಳ ಸುತ್ತಮುತ್ತಲಿನ ಮನೆಗಳ ಕಾರ್ ಪಾರ್ಕಿಂಗ್ ಜಾಗವಾಗಿ ದುರ್ಬಳಕೆಯಾಯಿತು.
ಇತ್ತೀಚೆಗೆ ಕೆರೆಯ ಅಂಗಳಕ್ಕೆ ಜೆ.ಸಿ.ಬಿ., ಬೃಹತ್ ಲಾರಿಗಳನ್ನು ನುಗ್ಗಿಸಿ ಸರ್ಕಾರದ ಖರ್ಚಿನಿಂದ ಕಟ್ಟಿದ ಆವರಣ ಗೋಡೆಯನ್ನು ಖಾಸಗಿಯವರು ಒಡೆದು ಹಾಕಿದ್ದಾರೆ. ಕಲ್ಲು ಬೆಂಚುಗಳನ್ನು ವಿರೂಪಗೊಳಿಸಿದ್ದಾರೆ. ನೆಟ್ಟ ಗಿಡಗಳ ಮೇಲೆ ಮಣ್ಣು, ನಿರ್ಮಾಣ ಕಾಮಗಾರಿ ಸಾಮಗ್ರಿಗಳನ್ನು ಸುರಿದು ಅವುಗಳ ಕಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಇಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡಕ್ಕೆ ಅನುಮತಿ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ನಿರ್ಮಾಣ ಎಗ್ಗಿಲ್ಲದೆ ನಡೆದಿದೆ. ಯಾವ ಕಾಮಗಾರಿ ಸ್ಥಳದಲ್ಲಿಯೂ ಪಾಲಿಕೆ ನಿಯಮದಂತೆ ಕಟ್ಟಡದ ವಿವರಗಳ ಫಲಕಗಳಿಲ್ಲ. ಕೋಟ್ಯಾಂತರ ರೂ. ಖರ್ಚು ಮಾಡಿದ ಕೆರೆಯೊಂದರ ಆರೋಗ್ಯಕ್ಕೆ ಅದರ ಆಸು ಪಾಸಿನ ನಿವಾಸಿಗಳಿಂದಲೇ ಸಂಚಕಾರ ಬಂದಿದೆ.
ಈ ಕೆರೆಯನ್ನು ಅಭಿವೃದ್ಧಿ ಮಾಡುವುದಕ್ಕೆಂದು ಮತ್ತೆ ಅಮೃತ್ ಯೋಜನೆ 2 ಅಡಿಯಲ್ಲಿ 1.35 ಕೋ.ರೂ. ವಿನಿಯೋಗಿಸಲಾಗುತ್ತಿದೆ. ಕುಡಿಯುವ ನೀರು, ಒಳಚರಂಡಿ ಯೋಜನೆಗಾಗಿ ಮಹಾನಗರಪಾಲಿಕೆಯಲ್ಲಿ ಜಾರಿಯಲ್ಲಿದ್ದ ಅಮೃತ್ ಯೋಜನೆಯ ಮುಂದುವರೆದ ಭಾಗ ‘ಅಮೃತ್-2.0’ ಅಡಿಯಲ್ಲಿ ಮಂಗಳೂರು ನಗರದ ಏಳು ಪಾರ್ಕ್ಗಳ ಮತ್ತು ಕೆರೆಗಳ ಅಭಿವೃದ್ಧಿಗೆ ಒಟ್ಟು 26.95 ಕೋ.ರೂ. ಅನುದಾನ ಲಭಿಸಿದೆ.
ಕೇಂದ್ರ ಪುರಸ್ಕೃತ ಯೋಜನೆ ಇದಾಗಿದ್ದು ಜಲಮೂಲಗಳ ಪುನಶ್ಚೇತನ, ಹಸಿರು ಜಾಗ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಲಭಿಸುತ್ತದೆ. ಜಲಮೂಲ, ಉದ್ಯಾನವನಗಳಲ್ಲಿ ಯಾವುದೇ ಒತ್ತುವರಿ ಇದ್ದಲ್ಲಿ ಯೋಜನೆ ಅನುಷ್ಠಾನಕ್ಕೆ ಮೊದಲು ತೆರವುಗೊಳಿಸಬೇಕಾಗುತ್ತದೆ. ಪಡೀಲ್ ಭೈರಾಡಿ ಕೆರೆ ಅಭಿವೃದ್ಧಿಗೆ ಈ ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಅಗಬೇಕಾಗಿದೆ. ಮಾನವೀಯ ನೆಲೆಯಲ್ಲಿ ದಾರಿ ಬಿಟ್ಟ ಕಾರಣಕ್ಕಾಗಿ ಒತ್ತುವರಿದಾರರು ಕೆರೆಯ ಅಸ್ತಿತ್ವಕ್ಕೆ ಸಂಚಕಾರ ತರುತ್ತಿದ್ದಾರೆ. ಇಂಟರ್ ಲಾಕ್ ಹಾಕಿದ ಕೆರೆಯ ಅಂಗಳವನ್ನು ಲಗಾಡಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಕೆರೆಯನ್ನು ದಿಕ್ಕೆಡಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದಿದ್ದಾರೆ.
