ಮಾಲಕನಿಂದ ಅಮಾನವೀಯ ‘ಕಾಡಿನನ್ಯಾಯ’ ಪ್ರದರ್ಶನ: ಪುತ್ತೂರಿನಲ್ಲಿ ಜನಾಕ್ರೋಶ-ಬಂಧನಕ್ಕೆ ಶಾಸಕರ ಸೂಚನೆ
ಪುತ್ತೂರು: ಕಾರ್ಮಿಕನೋರ್ವನ ಶವವನ್ನು ತಂದು ಮನೆಯ ಮುಂಭಾಗದ ರಸ್ತೆಯಲ್ಲಿಟ್ಟು ಹೊರಟು ಹೋದ ಅಮಾನವೀಯ ಘಟನೆಯೊಂದು ಪುತ್ತೂರಿನ ಸಾಲ್ಮರ ಎಂಬಲ್ಲಿ ಶನಿವಾರ ನಡೆದಿದ್ದು, ಕೆಲಸಕ್ಕೆ ಈತನನ್ನು ಕರೆದುಕೊಂಡು ಹೋದ ಮಾಲೀಕನ ‘ಕಾಡಿನನ್ಯಾಯ’ದ ವಿರುದ್ಧ ಭಾನುವಾರ ದಲಿತ ಸಂಘಟನೆಗಳು ಪುತ್ತೂರು ನಗರಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮೃತ ಕಾರ್ಮಿಕ ಶಿವಪ್ಪ (70) ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಕೆರೆಮೂಲೆ ನಿವಾಸಿಯಾಗಿದ್ದು, ಇವರನ್ನು ಶನಿವಾರ ಬೆಳಿಗ್ಗೆ ಕೆಲಸಕ್ಕಾಗಿ ಫರ್ನಿಚರ್ ಮಿಲ್ ಮಾಲಕ ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭ ಶಿವಪ್ಪ ಮೃತಪಟ್ಟಿದ್ದರು ಎನ್ನಲಾಗಿದೆ. ಈ ಮಾಹಿತಿಯನ್ನು ಮನೆಮಂದಿಗೆ ತಿಳಿದ ಮಾಲಕ ಪಿಕಪ್ ನಲ್ಲಿ ಮೃತದೇಹ ತಂದು ಮನೆ ಬಳಿ ರಸ್ತೆ ಬದಿಯಲ್ಲಿ ಹಾಕಿ ಹೋಗಿದ್ದಾರೆ ಎಂಬುವುದು ಕುಟುಂಬಸ್ಥರ ಆರೋಪವಾಗಿದೆ. ಈ ಬಗ್ಗೆ ಪುತ್ತೂರು ನಗರಠಾಣೆಗೆ ದೂರು ನೀಡಲಾಗಿತ್ತು.
ಫರ್ನಿಚರ್ ಮಾಲಕ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ದಲಿತ ಸಂಘಟನೆಗಳು ಮಾಲಕ ವಿರುದ್ಧ ಕಾನೂನು ಕ್ರಮ ದಾಖಲಿಸುವಂತೆ ಆಗ್ರಹಿಸಿ ಠಾಣೆಯ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದರು. ಭಾನುವಾರ ಬೆಳಿಗ್ಗೆ ಫರ್ನಿಚರ್ ಮಿಲ್ ಮುಂಭಾಗವೂ ನೂರಾರು ಮಂದಿ ಸೇರಿ ಮಾಲೀಕನ ಬಂಧನಕ್ಕೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬಂಧನಕ್ಕೆ ಸೂಚನೆ
ಮೃತ ಶಿವಪ್ಪ ಅವರ ಕುಟುಂಬವನ್ನು ಭೇಟಿ ಮಾಡಿದ ಶಾಸಕ ಅಶೋಕ್ ರೈ ಅವರು ಬಡವನಾಗಲೀ.. ಶ್ರೀಮಂತನಾಗಲೀ ಜೀವ ಎಲ್ಲರಿಗೂ ಒಂದೇ . ಈ ಸಾವಿಗೆ ನ್ಯಾಯ ಕೊಡಿಸುವೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದು ಮಾತ್ರವಲ್ಲದೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಲೀಕ ಮಾಡಿರುವ ಘೋರ ಕೃತ್ಯಕ್ಕೆ ಕ್ಷಮೆ ಇಲ್ಲ. ಜೀವಕ್ಕೆ ಬೆಲೆ ಕೊಡದ ಇವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದರು. ಫರ್ನಿಚರ್ ಮಿಲ್‌ಗೆ ಬೀಗ ಜಡಿಯುವಂತೆಯೂ ಅವರು ಪೊಲೀಸರಿಗೆ ನಿರ್ದೇಶನ ನೀಡಿದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಠಾಣೆಗೆ ಭೇಟಿ ನೀಡಿ ತಕ್ಷಣ ಮಾಲೀಕನ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶಾಸಕ ಸ್ಪಂಧನೆ:
ಶನಿವಾರದಂದು ಘಟನೆ ನಡೆದಿದೆ. ನಾವು ಶಾಸಕರ ಜೊತೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದೇನೆ. ಪೊಲೀಸರಿಗೂ ಕರೆ ಮಾಡಿ ತನಿಖೆ ನಡೆಸಿ ಕೇಸು ದಾಖಲಿಸುವಂತೆ ಸೂಚಿಸಿದ್ದಾರೆ. ಈ ವಿಚಾರವಾಗಿ ರಾತ್ರಿ 12 ಗಂಟೆ ತನಕವೂ ಶಾಸಕರಾದ ಅಶೋಕ್ ರೈ ಅವರು ನಿರಂತರ ನಮ್ಮ ಜೊತೆ ಸಂಪರ್ಕದಲ್ಲಿದ್ದು ನಮಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಮ್ಮ ಆದಿದ್ರಾವಿಡ ಸಂಘಟನೆಯ ಪರವಾಗಿ ಅವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಆದಿದ್ರಾವಿಡ ಯುವವೇದಿಕೆ ಅಧ್ಯಕ್ಷ ಮಹೇಶ್ ಮರಿಕೆ ತಿಳಿಸಿದರು.