ಯತ್ನಾಳ್‌ಗೆ ಹಿಂದೂ ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಯತ್ನಾಳ್‌ಗೆ ಹಿಂದೂ ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್


ಉಡುಪಿ: ಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್ ನೀಡಿದೆ. ಆದರೆ, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರನ್ನೂ ಸಮಾನರಾಗಿ ಕರೆದುಕೊಂಡು ಹೋಗುವುದೇ ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಶುಕ್ರವಾರ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಸೊತ್ತುಗಳನ್ನು ರಾಷ್ಟ್ರೀಕರಣಗೊಳಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಿಡಿಕಾರಿದರು. ಯತ್ನಾಳ್ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ-ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ. ಅದನ್ನು ಹೇಳಿಕೊಂಡೇ ಅವರು ಗೆದ್ದುಬಂದವರು. ಮಹಾತ್ಮ ಗಾಂಧಿ, ಅಂಬೇಡ್ಕರ್ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದರು.

ವಿಶ್ವನಾಥ್ ಹೇಳಿಕೆಗೆ ಗರಂ:

ಬಿಯರ್ ರೇಟ್ ಜಾಸ್ತಿ ಮಾಡಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ ಎಂಬ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, ಮಹಿಳೆಯರಿಗೆ ಮೊದಲು ಗೌರವ ಕೊಡಿ, ಬಿಯರ್ ಗಿಯರ್ ಆಮೇಲೆ ಮಾತನಾಡಿ. ಭಾಗ್ಯ ಯೋಜನೆಗಳಿಂದ ಜಿಡಿಪಿ ಜಾಸ್ತಿಯಾಗಿದೆ. ವಿಶ್ವನಾಥ್ ಹಿರಿಯರು, ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ. ರಾಜ್ಯ, ದೇಶದಲ್ಲಿ ಮಹಿಳೆಯರಿಗೆ ಉತ್ತೇಜನ ಕೊಡಲು ಯೋಜನೆ ಮಾಡಿದ್ದೇವೆ. ಈಗ ರಾಜ್ಯದಲ್ಲಿ ಮಹಿಳಾ ಸಬಲೀಕರಣ ನಡೆಯುತ್ತಿದೆ. ಬಸವಣ್ಣನ ನಾಡಿನಲ್ಲಿ ಮಹಿಳೆಯರನ್ನು ಸರಿಸಮನಾಗಿ ಕಾಣಿರಿ ಎಂದರು.

ಶೀಘ್ರವೇ ಉಡುಪಿಯಲ್ಲಿ ಜನತಾ ದರ್ಶನ ಮಾಡುತ್ತೇವೆ. ಉಡುಪಿ ಜಿಲ್ಲೆಯಲ್ಲಿ ಧರ್ಮ ದಂಗಲ್‌ಗೆ ಅವಕಾಶ ಕೊಡುವುದಿಲ್ಲ. ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ ಎಂದರು.

ಕಾಂಗ್ರೆಸ್ಸಿಗರು ನಗರ ನಕ್ಸಲರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಪ್ರಧಾನಮಂತ್ರಿ ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಪಕ್ಷಾತೀತವಾಗಿ ನರೇಂದ್ರ ಮೋದಿ ನಮ್ಮ ಪ್ರಧಾನಿ. ಪ್ರಧಾನಿ ಮೇಲೆ ನಮಗೆ ಗೌರವ ಇದೆ. ಕಾಂಗ್ರೆಸ್ಸನ್ನು ಗುರಿಯಾಗಿಸಿ ಅವರು ಆ ಮಾತು ಆಡಿದ್ದರೆ ಅದು ಅಸಾಂವಿಧಾನಿಕ ಮಾತಾಗುತ್ತದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article