
ಭಕ್ತಿ, ಜ್ಞಾನ, ಧರ್ಮದ ಕೇಂದ್ರಕ್ಕೆ ಮತ್ತೊಂದು ಹೆಸರೇ ಶ್ರೀ ಕ್ಷೇತ್ರ ಧರ್ಮಸ್ಥಳ
ಉಜಿರೆ: ಕಾರ್ತಿಕ ಮಾಸವೆಂದರೆ ದೀಪೋತ್ಸವಗಳ ಪರ್ವ ಕಾಲ. ಹಿಂದೂ ಧರ್ಮ, ದೇವಾಲಯಗಳಲ್ಲಿ ವಾರ್ಷಿಕ ಲಕ್ಷದೀಪೋತ್ಸವಗಳ ಸಂಭ್ರಮ, ಸಡಗರ. ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕು ಅಂತರಂಗ, ಬಹಿರಂಗವನ್ನು ಶುದ್ಧೀಕರಿಸುತ್ತದೆ. ದೀಪಾತ್ಮ ಜ್ಞಾನದ ಪ್ರತೀಕ. ಜನತೆ ಭಕ್ತಿ-ಜ್ಞಾನವಂತರಾಗಿ ಸುಜ್ಞಾನದ ಬೆಳಕು ನಾಡಿನುದ್ದಗಲಕ್ಕೆ ಪಸರಿಸಬೇಕು. ಪರಿಶುದ್ಧ ಭಕ್ತಿ-ಧರ್ಮದ ಹಾದಿಯಲ್ಲಿ ಕ್ರಮಿಸಿ, ಜ್ಞಾನ ಸಂಪನ್ನರಾಗಿ, ವಿಶ್ವಕ್ಕೇ ಭಕ್ತಿ-ಜ್ಞಾನದ ದಿವ್ಯ ಸಂದೇಶವನ್ನು ಸಾರಿ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾತ್ರ ಮಹತ್ತರವಾದುದು.
ಸರ್ವಧರ್ಮ ಸಮನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಕೇವಲ ಜನಜಾತ್ರೆಯಲ್ಲ. ಅದು ಭಕ್ತಿ ಭಾವೈಕ್ಯದ ಸಮ್ಮಿಲನ. ಅಂತರಂಗ ಬಹಿರಂಗ ಶುದ್ಧಿಯ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಜ್ಞಾನ ಸಿಂಚನ. ನಾಡಿನ ನಾನಾ ಮೂಲೆಗಳಿಂದ ಸಹಸ್ರ ಸಹಸ್ರ ಭಕ್ತಾದಿಗಳು ಭಕ್ತಿ ಭಾವ ಪರವಶರಾಗಿ ಒಂದು ಗೂಡುವ ತ್ರಿವೇಣಿ ಸಂಗಮ. ಈ ಬಾರಿ ನ.26ರಿಂದ ಮೊದಲ್ಗೊಂಡು ಡಿ.1 ರವರೆಗೆ ಶ್ರೀ ಕ್ಷೇತ್ರದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.
ಧರ್ಮದ ಬೆಳಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸತ್ಯ-ಧರ್ಮ-ನ್ಯಾಯದ ನೆಲೆವೀಡು. ಶ್ರೀ ಮಂಜುನಾಥಸ್ವಾಮಿಯ ಸನ್ನಿಧಿ ಚತುರ್ವಿಧ ದಾನ, ಧರ್ಮಗಳಿಗೆ ಪ್ರಸಿದ್ಧ. ಅನ್ನದಾನ, ವಿದ್ಯಾದಾನ, ಅಭಯದಾನ ಹಾಗೂ ಆರೋಗ್ಯ ದಾನಗಳಿಂದಾಗಿ ಕ್ಷೇತ್ರ ಶತ ಶತಮಾನಗಳಿಂದಲೂ ತನ್ನ ಹೆಸರನ್ನು ಅನ್ವರ್ಥಗೊಳಿಸಿದೆ. ಕ್ಷೇತ್ರದ ನಿರಂತರ ದಾನ ಧರ್ಮಗಳಿಂದಾಗಿ ಕುಡುಮಪುರ ಹೆಸರು ಧರ್ಮಸ್ಥಳವಾಗಿ ಮಾರ್ಪಾಟುಗೊಂಡಿದೆ. ಪರಮೇಶ್ವರ ಭುವಿಗಿಳಿದ ಕೈಲಾಸವೆಂದೇ ಖ್ಯಾತಿ ಪಡೆದ ಕ್ಷೇತ್ರದಲ್ಲಿ ಹಬ್ಬ, ಹರಿದಿನ ನಿತ್ಯೋತ್ಸವಗಳು ನಿರಂತರ ನಡೆಯುತ್ತಿರುತ್ತವೆ. ಕ್ಷೇತ್ರದ ಲಕ್ಷದೀಪೋತ್ಸವ ಎಲ್ಲ ಉತ್ಸವಗಳಿಗೆ ಮುಕುಟಪ್ರಾಯದಂತಿದೆ.
ಕಾರ್ತೀಕ ಮಾಸದ ಐದು ದಿನಗಳ ಕಾಲ ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ವಿಶೇಷ ಮೆರುಗು. ಕ್ಷೇತ್ರದ ಎಲ್ಲ ಕಟ್ಟಡ, ಅತಿಥಿಗೃಹ, ದೇವಸ್ಥಾನದ ಬೀದಿಗಳೆಲ್ಲವೂ ವರ್ಣ ವಿದ್ದ್ಯುದ್ದೀಪಾಲಂಕಾರಗಳಿಂದ ಝಗಮಗಿಸುತ್ತದೆ. ಪುಷ್ಪ, ವಿದ್ಯುದ್ದೀಪಗಳಿಂದ ಧರ್ಮಸ್ಥಳ ಕ್ಷೇತ್ರ ಶೃಂಗಾರಗೊಳ್ಳುತ್ತದೆ. ಪ್ರೌಢಶಾಲಾ ಪ್ರಾಂಗಣದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡು ಕೊನೆಯ ದಿನದ ವರೆಗೂ ವ್ಯಾಪಾರ ವ್ಯವಹಾರ ಬಿರುಸಾಗಿ ಸಾಗುತ್ತದೆ. ದಿನವೂ ಸಹಸ್ರ ಸಹಸ್ರ ಮಂದಿ ಸೇರಿಕೊಂಡು ಜಾತ್ರೆಯ ಸಂಭ್ರಮದಲ್ಲಿ ಭಾಗಿಗಳಾಗುತ್ತಾರೆ. ಕೊಡುಕೊಳ್ಳುವ ವ್ಯವಹಾರದಲ್ಲಿ ನಿರತರಾಗುತ್ತಾರೆ. ಐದನೇ ದಿನ ರಾತ್ರಿ ಬೆಳ್ಳಿ ರಥೋತ್ಸವ ಹಾಗೂ ಮರುದಿನ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತವೆ.
ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲೇ ಅತ್ಯಂತ ಸ್ವಚ್ಛ, ನಿರ್ಮಲ ಪುಣ್ಯಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿನಿತ್ಯ ಕ್ಷೇತ್ರಕ್ಕೆ ಎಲ್ಲೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸಿದರೂ ಸ್ವಚ್ಛತೆ, ಶಿಸ್ತು, ದಕ್ಷತೆ ಎದ್ದು ಕಾಣುವ ಅಂಶ. ಭಕ್ತರು ನಿರ್ಮಲ ಮನಸ್ಸಿನಿಂದ ಪರಿಶುದ್ಧರಾಗಿ ಬಂದು ಶ್ರೀ ಸ್ವಾಮಿಯ ದರ್ಶನ ಭಾಗ್ಯ ಪಡೆಯಲು ಎಲ್ಲ ಸವಲತ್ತು, ಅನುಕೂಲವನ್ನು ಕ್ಷೇತ್ರ ಕಲ್ಪಿಸುತ್ತಿದೆ. ಧರ್ಮದ ಜ್ಯೋತಿ ಬೆಳಗುವ ಮಂಜುನಾಥ ಸ್ವಾಮಿಯ ದಿವ್ಯ ದರ್ಶನ ಪಡೆಯುವುದೇ ಅಪೂರ್ವ ಸುಯೋಗ, ಸೌಭಾಗ್ಯ.
ಧರ್ಮಸ್ಥಳವಾದ ‘ಕುಡುಮ’
ಎಂಟು ಶತಮಾನಗಳ ಹಿಂದೆ ‘ಮಲ್ಲರಮಾಡಿ’ ಹೆಸರಿನ ‘ಕುಡುಮ’ದಲ್ಲಿ ಜೈನ ಧರ್ಮೀಯರಾದ ಬಿರ್ಮಣ ಪೆರ್ಗಡೆ, ಅಮ್ಮು ಬಲ್ಲಾಳ್ತಿ ದಂಪತಿಗಳ ಒಡೆತನದ ನೆಲ್ಯಾಡಿ ಬೀಡು ದಾನ ಧರ್ಮಾದಿಗಳಿಗೆ ಹೆಸರಾಗಿತ್ತು. 16ನೇ ಶತಮಾನದಲ್ಲಿ ಪೆರ್ಗಡೆ ವಂಶದ ಧರ್ಮಾಧಿಕಾರಿ ದೇವರಾಜ ಹೆಗ್ಗಡೆಯವರ ಕಾಲದಲ್ಲಿ ಉಡುಪಿ ಸೋದೆ ವಾದಿರಾಜ ಯತಿಗಳು ಆಗಮಿಸಿ ಕ್ಷೇತ್ರದ ದಾನ ಧರ್ಮಾಧಿಗಳನ್ನು ಕಂಡು ಸ್ಥಳ ಧರ್ಮದ ನೆಲೆಯಾಗಿ ‘ಧರ್ಮಸ್ಥಳ’ವಾಗಿ ಕೀರ್ತಿ ಗಳಿಸುವುದು ಎಂಬ ಅನುಗ್ರಹೊಕ್ತಿಯಂತೆ ಕ್ಷೇತ್ರ ‘ಧರ್ಮಸ್ಥಳ’ ಎಂಬ ಅಭಿದಾನದಿಂದ ವಿಶ್ವಾದ್ಯಂತ ಕೀರ್ತಿ ಪಸರಿಸಿದೆ. ಅಂದಿನಿಂದ ಕುಡುಮ ಧರ್ಮಸ್ಥಳವೆಂದೇ ಪ್ರಸಿದ್ಧಿ ಪಡೆಯಿತು.
ಕ್ಷೇತ್ರದ ಆಡಳಿತ ಜೈನ ಧರ್ಮಾಧಿಕಾರಿ ಹೆಗ್ಗಡೆ ಮನೆತನದ್ದು, ಆರಾಧ್ಯಮೂರ್ತಿ ಶ್ರೀ ಮಂಜುನಾಥ ಸ್ವಾಮಿ ಶಿವ, ಅವನನ್ನು ಆರಾಧಿಸುವ ಅರ್ಚಕರು ವೈಷ್ಣವರು-ಹೀಗೆ ಧರ್ಮಸ್ಥಳ ಸರ್ವ ಧರ್ಮ ಕ್ಷೇತ್ರವಾಗಿ ತ್ರಿವೇಣಿ ಸಂಗಮವಾಗಿದೆ. ಯಾವುದೇ ಜಾತಿ, ಮತ, ಧರ್ಮ, ಪಂಥ ಭೇದವಿಲ್ಲದೆ ಸಮಸ್ತ ಭಕ್ತಾದಿಗಳು ಶ್ರೀ ಸ್ವಾಮಿಯ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿ ಕೊಂಡು ತಮ್ಮ ಬೇಡಿಕೆ, ಸಮಸ್ಯೆಗಳನ್ನು ನಿವೇದಿಸಿಕೊಂಡು ಸಂತೃಪ್ತಿಯಿಂದ ಮರಳುತ್ತಾರೆ.
ಸರ್ವಧರ್ಮ ಸಮನ್ವಯತೆ:
ಧರ್ಮಸ್ಥಳ ಸರ್ವಧರ್ಮ ಸಮನ್ವಯ ಕೇಂದ್ರವೆಂದೇ ಜನಜನಿತ. ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿರುವ ಸರ್ವಧರ್ಮ ಸಮ್ಮೇಳನದಲ್ಲಿ ಖ್ಯಾತ ಧರ್ಮಗುರುಗಳು, ಚಿಂತಕರು, ವಾಗ್ಮಿಗಳನ್ನು ಕರೆಸಿ ಅವರಿಂದ ಸರ್ವಧರ್ಮೀಯ ತತ್ವಾದರ್ಶಗಳನ್ನು, ಆಯಾ ಧರ್ಮದ ಸಾರವನ್ನು ಮನದಟ್ಟಾಗುವಂತೆ ತಿಳಿಹೇಳಿ ಜನರ ಬಾಳಲ್ಲಿ ಶಾಂತಿ,ಸೌಹಾರ್ದತೆ, ನೆಮ್ಮದಿ, ಸಾಮರಸ್ಯ ಮೂಡಿಸಲು ಕಾರ್ಯಕ್ರಮ ರೂಪಿಸಿಕೊಳ್ಳಲಾಗುತ್ತದೆ. ಸರ್ವಧರ್ಮ ಸಮನ್ವಯದ ಜತೆಗೆ ಸಾಹಿತ್ಯ, ಲಲಿತಕಲೆಯ ಪೋಷಣೆಯನ್ನೂ ಕ್ಷೇತ್ರ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಉದ್ಯೋಗ ತರಬೇತಿ ಕೇಂದ್ರ ರುಡ್ ಸೆಟ್, ಸ್ತ್ರೀ ಸಬಲೀಕರಣಕ್ಕೆ ‘ಸಿರಿ’, ಧರ್ಮೋತ್ಥಾನ ಟ್ರಸ್ಟ್ ಮೂಲಕ ವಿನಾಶದಂಚಿನಲ್ಲಿರುವ ಗುಡಿ, ದೇವಾಲಯಗಳ ಅಭಿವೃದ್ಧಿ, ಹತ್ತಾರು ಯೋಜನೆಗಳು, ಸಮಾಜಮುಖಿ ಕಾರ್ಯಕ್ರಮಗಳು, ಮದ್ಯ-ದುಶ್ಚಟಮುಕ್ತ ಸಮಾಜ ನಿರ್ಮಾಣ, ಯಕ್ಷಗಾನ ಕಲಾ ಪ್ರಸಾರಕ್ಕಾಗಿ ಯಕ್ಷಗಾನ ಮೇಳ, ಶಿಕ್ಷಣ, ಆರೋಗ್ಯ, ವೈದ್ಯಕೀಯ ಸೇವೆ, ಬಡವರ ಕಲ್ಯಾಣಕ್ಕಾಗಿ ಉಚಿತ ಸಾಮೂಹಿಕ ವಿವಾಹ ಯೋಜನೆ-ಹೀಗೆ ವಿವಿಧ ಯೋಜನೆಗಳು ಕ್ಷೇತ್ರದ ಕೀರ್ತಿಯನ್ನು ಜಗದಗಲಕ್ಕೆ ಪಸರಿಸಿದೆ.
ಧರ್ಮ-ಸಾಹಿತ್ಯ-ಸಾಂಸ್ಕೃತಿಕ ಸಮ್ಮಿಲನ:
ಕ್ಷೇತ್ರದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರಾಶಸ್ತ್ಯ, ಕಲಾವಿದರು-ವಿದ್ವಾಂಸರಿಗೆ ಮನ್ನಣೆ ದೊರೆಯಬೇಕೆಂಬ ಸದಾಶಯದೊಂದಿಗೆ ಕ್ಷೇತ್ರದಲ್ಲಿ 1933ರಲ್ಲಿ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಆರಂಭಿಸಿದ ಸರ್ವಧರ್ಮ-ಸಾಹಿತ್ಯ ಸಮ್ಮೇಳನಗಳು ಕಾಲ ಕಾಲಕ್ಕೆ ಮಾರ್ಪಾಡು ಹೊಂದಿ, ವಿಸ್ತಾರಗೊಂಡು ಲಲಿತಕಲೆಗಳ ಪ್ರದರ್ಶನದೊಂದಿಗೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ನ.26 ರಿಂದ ಡಿ.1 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಲಕ್ಷದೀಪೋತ್ಸವ ವೈಭವ:
ಶ್ರೀ ಮಂಜುನಾಥ ಸ್ವಾಮಿಗೆ ನ.26 ರಂದು ಹೊಸಕಟ್ಟೆ ಉತ್ಸವ ನ.27: ಕೆರೆಕಟ್ಟೆ ಉತ್ಸವ ನ.28: ಲಲಿತೋದ್ಯಾನ ಉತ್ಸವ. ನ.29: ಕಂಚಿಮಾರುಕಟ್ಟೆ ಉತ್ಸವ. ನ.30: ಗೌರಿಮಾರುಕಟ್ಟೆ ಉತ್ಸವ(ಲಕ್ಷದೀಪೋತ್ಸವ). ಡಿ.1 ರಂದು: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣಪೂಜೆ ನಡೆದು ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಳ್ಳಲಿದೆ.
ಪಾದಯಾತ್ರೆ: ನ.26 ರಂದು 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಸಮಸ್ತ ಭಕ್ತಾದಿಗಳ ಭಕ್ತಿ,ಭಜನೆಯ ಪಾದಯಾತ್ರೆ ನಡೆಯಲಿದ್ದು, 25,000ಕ್ಕೂ ಮಿಕ್ಕಿ ಊರ-ಪರವೂರಿನ ಭಕ್ತರು, ಅಭಿಮಾನಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಪ್ರಾರ್ಥನೆ, ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು.ಶಾಸಕ ಹರೀಶ್ ಪೂಂಜ ಮತ್ತು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ನೇತೃತ್ವದಲ್ಲಿ 12ನೇ ವರ್ಷದ ಪಾದಯಾತ್ರೆ ನಡೆಯಲಿದೆ.
ರಾಜ್ಯಮಟ್ಟದ ವಸ್ತುಪ್ರದರ್ಶನ:
ನ.26 ರಿಂದ 30ರ ವರೆಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ಆವರಣದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು, ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಗ್ರಾಮೀಣ ಗುಡಿಕೈಗಾರಿಕೆಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಮಿಕ್ಕಿ ವ್ಯಾಪಾರ ಮಳಿಗೆಗಳು ಜನರನ್ನು ಆಕರ್ಷಿಸುತ್ತವೆ. ಜತೆಗೆ ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾಜ್ಯದ ವಿವಿಧ ಸಾಂಸ್ಕೃತಿಕ ತಂಡಗಳಿಂದ ಸಂಗೀತ, ನೃತ್ಯ, ಯಕ್ಷಗಾನ, ವೈವಿಧ್ಯಮಯ ಕಾರ್ಯಕ್ರಮಗಳು ಪ್ರತಿ ಸಂಜೆ 6ರಿಂದ ರಾತ್ರಿ 10ರವರೆಗೂ ಮನರಂಜನೆ ನೀಡಲಿವೆ.
ನ.28ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ ಲಲಿತಕಲಾಗೋಷ್ಠಿಯಲ್ಲಿ ನಾಗಸ್ವರವಾದನ, ಶಂಕರ ಶಾನಭಾಗ್ ಮತ್ತು ತಂಡದಿಂದ ಸಾತ್ವಿಕ ಸಂಗೀತ ಹಾಗೂ ವಿದುಷಿ ಸುಮಂಗಲಾ ರತ್ನಾಕರ ರಾವ್ ನಿರ್ದೇಶನದಲ್ಲಿ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.
ನ.29: ಸರ್ವಧರ್ಮ ಸಮ್ಮೇಳನ
ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸಲಿದ್ದಾರೆ. ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಮತ್ಪರಮಹಂಸ ಪರಿವ್ರಾಜಕಾಚಾರ್ಯ ಸಚ್ಚಿದಾನಂದ ಪ್ರಣವಸ್ವರೂಪ ಆಚಾರ್ಯ ಮಹಾಮಂಡಲೇಶ್ವರ ಜಗದ್ಗುರು ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಸಂಶೋಧಕ ಡಾ. ಜಿ.ಬಿ. ಹರೀಶ, ನಿವೃತ್ತ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಮತ್ತು ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ನೀಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಚೆನ್ನೈಯ ಶೀಜಿತ್ ಮತ್ತು ಪಾರ್ವತೀ ತಂಡದ ಕಲಾವಿದರಿಂದ ಭರತನಾಟ್ಯ ನಡೆಯಲಿದೆ.
ನ.30: ಸಾಹಿತ್ಯ ಸಮ್ಮೇಳನ: ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ್ ಉದ್ಘಾಟಿಸಲಿದ್ದು, ನಿವೃತ್ತ ಪ್ರಾಂಶುಪಾಲ,ಲೇಖಕ, ಸಂಶೋಧಕ ಡಾ. ಪಾದೆಕಲ್ಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ, ಪ್ರಾಧ್ಯಾಪಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್ ಮತ್ತು ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾನ ಗಾರುಡಿಗ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಶ್ರೀಕ್ಷೇತ್ರದ ಲಕ್ಷದೀಪೋತ್ಸವಕ್ಕೆ ಸಕಲ ಸಿದ್ಧತೆಗಳು, ವರ್ಣ ವಿದ್ದ್ಯುದ್ದೀಪಾಲಂಕಾರಗಳು ಪೂರ್ಣಗೊಂಡಿವೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲತೆಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿವೆ.