ಬಿಪಿಎಲ್ ಕಾರ್ಡ್ ರದ್ದು ಖಂಡಿಸಿ ಪ್ರತಿಭಟನೆ

ಬಿಪಿಎಲ್ ಕಾರ್ಡ್ ರದ್ದು ಖಂಡಿಸಿ ಪ್ರತಿಭಟನೆ


ಉಳ್ಳಾಲ: ಪಾನ್-ಆಧಾರ್ ಕಾರ್ಡ್‌ಗೆ ಲಿಂಕ್ ವಿಳಂಬ ಕಾರಣದಿಂದ ದಂಡ ಕಟ್ಟಿದ ಅಸಂಖ್ಯಾತ ಬಿಎಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮ ವಿರೋಧಿಸಿ, ರದ್ದುಗೊಳಿಸಿದ ಬಿಪಿಎಲ್ ಕಾರ್ಡ್ಗಳನ್ನು ಕೂಡಲೇ ವಾಪಸ್ ನೀಡುವಂತೆ ಒತ್ತಾಯಿಸಿ ಗುರುವಾರ ನಾಟೆಕಲ್ ನಲ್ಲಿರುವ ಉಳ್ಳಾಲ ತಾಲೂಕು ಕಚೇರಿಯ ಮುಂಭಾಗದಲ್ಲಿ ಸಿಪಿಐಎಂ ಉಳ್ಳಾಲ ಮತ್ತು ಮುಡಿಪು ವಲಯ ಸಮಿತಿಯ ಜಂಟಿ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ಪಾನ್ ಕಾರ್ಡ್ ಲಿಂಕ್ ಸಂದರ್ಭ ಕೇವಲ ಒಂದು ಸಾವಿರ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದನ್ನೇ ನೆಪವಾಗಿಸಿ ಸರ್ಕಾರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿರುವುದರಿಂದ ತಾಲೂಕಿನಲ್ಲಿ ಕೇವಲ ಒಂದು ತಿಂಗಳಲ್ಲೇ ಏಳು ಸಾವಿರಕ್ಕೂ ಹೆಚ್ಚು ಜನ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ಸಿಪಿಐಎಂ ಜಿಲ್ಲಾ ಸದಸ್ಯ ಸುನಿಲ್ ಬಜಾಲ್ ಮಾತನಾಡಿ, ಎಪಿಎಲ್ ಕಾರ್ಡ್ ಬಳಕೆ ಸತ್ತ ಬಳಿಕ ಹೆಣ ಸುಡುವ ಸಂದರ್ಭ ಮಾತ್ರ ಬಳಕೆಯಾಗುತ್ತಿದ್ದರೆ, ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗುತ್ತಿದೆ. ಕಳೆದ 21 ವರ್ಷಗಳಲ್ಲಿ ಅದೆಷ್ಟು ಮುಖ್ಯಮಂತ್ರಿ, ಸಚಿವ, ಶಾಸಕರು ಬಂದರೂ ಸರ್ವೇ ಬಿಟ್ಟರೆ ಪಡಿತರ ಚೀಟಿ ಅವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಿಲ್ಲ. ಬಿಜೆಪಿ ಸರಿಯಿಲ್ಲ ಎಂದು ಕಾಂಗ್ರೆಸ್ ಗೆ ಜನ ಮತ ಹಾಕಿದರು. ಆದರೆ ಕಾಂಗ್ರೆಸ್ ಸರ್ಕಾರ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಗ್ಯಾರಂಟಿ ಯೋಜನೆಗಳಿಗೆ ಫಲಾನುಭವಿಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿ ಕರ್ನಾಟಕದಲ್ಲಿ ಬಡವರೇ ಇಲ್ಲ ಎನ್ನುವುದನ್ನು ಸಾಬೀತುಪಡಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಳ್ಳಾಲ ತಾಲೂಕು ಆಗಿ ಎರಡು ವರ್ಷಗಳಾದರೂ ಕಚೇರಿ ಫಲಕಕ್ಕೆ ಮಾತ್ರ ಸೀಮಿತವಾಗಿದೆ. ಇಲ್ಲಿ ಸರಿಯಾದ ಅಧಿಕಾರಿಗಳಾಗಲೀ, ವಾಹನ ನಿಲುಗಡೆ ವ್ಯವಸ್ಥೆ, ಸರಿಯಾದ ಕಟ್ಟಡ, ಶೌಚಗೃಹ ಇಲ್ಲ. ಮುಂದಿನ ದಿನಗಳಲ್ಲಿ ಬರ್ತೀವಿ ಅದನ್ನೂ ಕೇಳ್ತೀವಿ ಎಂದು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಮುಖಂಡರುಗಳಾದ ಪದ್ಮಾವತಿ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಜಯಂತ್ ನಾಯಕ್, ರಿಝ್ವಾನ್ ಹರೇಕಳ, ಸುಂದರ ಕುಂಪಲ, ಪ್ರಮೋದಿನಿ ತೊಕ್ಕೊಟ್ಟು, ಇಬ್ರಾಹಿಂ ಮದಕ, ರಝಾಕ್ ಮೊಂಟೆಪದವು, ರಾಮಚಂದ್ರ ಪಜೀರ್, ಅಶ್ಫಕ್ ಅಳೇಕಲ, ಅಬೂಬಕ್ಕರ್ ಜಲ್ಲಿ, ಶೇಖರ್ ಕುತ್ತಾರ್ ಹಾಗೂ ಜನಾರ್ದನ್ ಉಪಸ್ಥಿತರಿದ್ದರು. 

ಮುಡಿಪು ವಲಯ ಸಿಪಿಐಎಂ ಕಾರ್ಯದರ್ಶಿ ರಫೀಕ್ ಹರೇಕಳ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article