ಟೆಸ್ಟ್ ರೈಡ್ ನೋಡುತ್ತೇನೆ ಎಂದು ಕಾರನ್ನೇ ಪಟಾಯಿಸಿದ ಭೂಪ
Thursday, December 19, 2024
ಬಂಟ್ವಾಳ: ಟೆಸ್ಟ್ ರೈಡ್ ನೋಡುತ್ತೇನೆ ಎಂದು ಕೀಯನ್ನು ಪಡಕೊಂಡು ಕಾರನ್ನು ಏಕಾಏಕಿ ಚಲಾಯಿಸಿಕೊಂಡು ಹೋದಾತ ವಾಪಸ್ ಬಾರದೆ ಮೋಸ ಮಾಡಿರುವ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಫಿರ್ಯಾದಿದಾರರು ಬಿ.ಸಿ. ರೋಡಿನ ತಲಪಾಡಿಯಲ್ಲಿ ನಡೆದಿದೆ.
ತಲಪಾಡಿಯಲ್ಲಿರುವ ಸೆಕೆಂಡ್ ಹ್ಯಾಂಡ್ ಸೇಲ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಬುಧವಾರ ಸಂಜೆ ಅಂಗಡಿಗೆ ಬಂದಿದ್ದ 20 ರಿಂದ 25 ವರ್ಷ ವಯಸ್ಸಿನ ಅಪರಿಚಿತ ಯುವಕ ಹೊರಗಡೆ ನಿಲ್ಲಿಸಲಾಗಿದ್ದ ನೀಲಿ ಬಣ್ಣದ ಮಾರುತಿ ರಿಟ್ಸ್ ಕಾರಿನ ದರ ಸಹಿತ ಇತರೆ ಮಾಹಿತಿಯನ್ನು ಸಿಬ್ಬಂದಿ ಮೊಹಮ್ಮದ್ ಮುಬಾರಕ್ ಅವರಲ್ಲಿ ವಿಚಾರಿಸಿದ್ದಾನೆ.
ಬಳಿಕ ಟೆಸ್ಟ್ ರೈಡ್ ನೋಡುತ್ತೇನೆ ಎಂದು ನಂಬಿಸಿ ಕಾರಿನ ಕೀಯನ್ನು ಪಡೆದುಕೊಂಡು ಸ್ಟಾರ್ಟ್ ಮಾಡಿ ಒಮ್ಮೆಲೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕಾರಿನ ಮೌಲ್ಯ 3.30 ಲ.ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.