
ಅಪಘಾತ: ಕಾಂಗ್ರೆಸ್ ಮುಖಂಡ ಸಾವು
Thursday, December 5, 2024
ಕಾರ್ಕಳ: ಕಾಂಗ್ರೆಸ್ ಮುಖಂಡರೊಬ್ಬರು ಕಾರ್ಕಳದ ನೀರೆ ಹೆದ್ದಾರಿ ಶಾಲಾ ಬಳಿ ಕಾರು ಹಾಗೂ ಬೈಕ್ ಮಧ್ಯೆ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಬೈಕ್ ಸವಾರರನ್ನು ಕಾಂಗ್ರೆಸ್ ಮುಖಂಡ, ನೀರೆ ನಿವಾಸಿ ಶಂಕರ್ ಶೆಟ್ಟಿ (70) ಎಂದು ಗುರುತಿಸಲಾಗಿದೆ.
ಬೈಲೂರು ಪ್ರೌಢಶಾಲಾ ಶಿಕ್ಷಕ ಹರೀಶ್ ಶೆಟ್ಟಿ ಎಂಬವರು ತಮ್ಮ ಕಾರಿನಲ್ಲಿ ನೀರೆ ಹೆದ್ದಾರಿ ಶಾಲಾ ಕ್ರಾಸ್ ಬಳಿ ಸಾಗುತ್ತಿದ್ದಾಗ ಶಂಕರ್ ಶೆಟ್ಟಿ ಅವರ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಶಂಕರ್ ಶೆಟ್ಟಿ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆ ಸಾಗಿಸಲಾಯಿತಾದರೂ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಶಂಕರ್ ಶೆಟ್ಟಿ ಅವರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಬ್ರಹ್ಮ ಬೈದೆರ್ಕಳ ಗರಡಿ ನೀರೆ ಇದರ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.