
ಜನಪದರ ಬದುಕು ಮೌಲ್ಯದಿಂದ ಕೂಡಿದ್ದರೆ ಅದೇ ದೊಡ್ಡ ಸಾಹಿತ್ಯ: ಕೆ. ಗುಣಪಾಲ ಕಡಂಬ
ಕಾರ್ಕಳ: ಜನಪದರ ಬದುಕು ಮೌಲ್ಯದಿಂದ ಕೂಡಿದ್ದರೆ ಅದೇ ದೊಡ್ಡ ಸಾಹಿತ್ಯ, ಸಾಹಿತ್ಯದ ಆಶಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ಮುಂದಿನ ಪೀಳಿಗೆಗೆ ಕಟ್ಟಿ ಕೊಡುವುದಾಗಿದೆ ಎಂದು ಜನಪದ ವಿದ್ವಾಂಸ ಕೆ. ಗುಣಪಾಲ ಕಡಂಬ ಹೇಳಿದರು.
ಅವರು ಕಾರ್ಕಳ ತಾಲೂಕಿನ ಶಿರ್ಲಾಲು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆದ ಇಪ್ಪತ್ತನೆಯ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿಕರ, ಜನಪದರ ಬದುಕು ಹಸನಾಗಬೇಕು. ನಲಿವಿನ ಸಾಹಿತ್ಯ ಅವರಿಂದ ಹೊರಹೊಮ್ಮಬೇಕು ಹಾಗೇ ಆಗಬೇಕಾದರೆ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು ಎಂದರು.
ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಜನಪದ ಕಂಬಳಕ್ಕೆ ಆಧುನಿಕತೆ ರೂಪು ಕೊಟ್ಟವರು ಎಂದು ಸಮ್ಮೇಳನ ಅಧ್ಯಕ್ಷ ಗುಣಪಾಲಕಡಂಬರನ್ನು ಕೊಂಡಾಡಿದರು. ಸಾಹಿತ್ಯ ಬದುಕನ್ನು ಬುತ್ತಿ ಕಟ್ಟಿ ಕೊಡುತ್ತದೆ. ವಿದ್ಯಾರ್ಥಿಗಳೆ ಸಾಹಿತ್ಯ ದ ಬದುಕನ್ನು ಪಾವನವಾಗಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು.
ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯನಗನುಡಿಗಳನ್ನಾಡಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೂಡ ಸದಾನಂದ ಶೆಣೈ ಅವರು ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಜಾನಪದ ವಿದ್ವಾಂಸ ಕೆ. ಗುಣಪಾಲ ಕಡಂಬ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ರಂಗ ಸಂಸ್ಕೃತಿಯ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ., ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಜೈನ್, ಶಾಲ ಮುಖ್ಯ ಶಿಕ್ಷಕ ನರಸಿಂಹ ನಾಯಕ್, ಪ್ರಾಂಶುಪಾಲ ಬೇಬಿ ಈಶ್ವರ ಮಂಗಲ, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಾಂತಿ ರಾಜ್ ಜೈನ್, ಶಿರ್ಲಾಲು ಗ್ರಾ.ಪಂ ಅಧ್ಯಕ್ಷ ಶೋಭ, ಕಸಾಪ ಜಿಲ್ಲಾ ಕಾರ್ಯದರ್ಶಿ ಸತೀಶ್, ಕಂಬಳ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಮುನಿರಾಜ್ ರೆಂಜಾಳ ಉಪಸ್ಥಿತರಿದ್ದರು.