ಲಂಚಕ್ಕೆ ಬೇಡಿಕೆ: 3 ವರ್ಷ ಶಿಕ್ಷೆ, 50 ಸಾವಿರ ದಂಡ
ಮಂಗಳೂರು: ಕಡಬ ತಾಲೂಕಿನ ಐತ್ತೂರಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರೇಮ್‌ಸಿಂಗ್ ನಾಯ್ಕ ಅವರು ಲಂಚಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ೩ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮೂರು ವರ್ಷ ಸಾದಾ ಸಜೆ, 50 ಸಾವಿರ ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ತಿಂಗಳ ಕಾಲ ಸಾದಾ ಸಜೆ ವಿಧಿಸಿ ಆದೇಶಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರೇಮ್ ಸಿಂಗ್ ನಾಯ್ಕ 2019ರ ಜೂನ್ 3 ರಂದು 9,000 ರೂ. ಲಂಚದ ಹಣಕ್ಕೆ ಬೇಡಿಕೆಯೊಡ್ಡಿದ್ದು, ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ ಸುಂದರ್ ಹೆಚ್.ಎಂ. ತನಿಖಾಧಿಕಾರಿಯಾಗಿದ್ದು, ಆರೋಪಿಯ ವಿರುದ್ಧ ಘನ ೩ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಮಂಗಳೂರು ಇಲ್ಲಿಗೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದಿರುತ್ತದೆ. ಸದರಿ ಪ್ರಕರಣದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ರವೀಂದ್ರ ಮುನ್ನಿಪಾಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.