
ಕ್ವಾರಿ ಮಾಲಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ನೀಡಬೇಕು: ಮನೋಜ್ ಶೆಟ್ಟಿ
ಮಂಗಳೂರು: ಕಲ್ಲಿನ ಕ್ವಾರಿ ಮತ್ತು ಕ್ರಶರ್‌ಗಳಿಗೆ ಅಂತಿಮ ಬಳಕೆದಾರ (ಎಂಡ್ ಪಾಯಿಂಟ್) ರಾಜಧನ ಸಂಗ್ರಹಿಸುವ ಕ್ರಮಗಳನ್ನು ಅನುಸರಿಸುವ ಮೂಲಕ ರಾಜ್ಯ ಸರಕಾರದ ಖಜಾನೆಗೆ ವಾರ್ಷಿಕ 5000 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ. ಈ ಬಗ್ಗೆ ಸರಕಾರ ಸಂಘದ ಪದಾಕಾರಿಗಳ ಜತೆ ಮಾತುಕತೆ ನಡೆಸಲು ಮುಂದಾಗಬೇಕು. ಜತೆಗೆ ಕ್ವಾರಿ ಮಾಲಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ನೀಡಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಕಲ್ಲು ಕ್ರಶರ್ ಮತ್ತು ಕ್ವಾರಿ ಮಾಲಕರ ಸಂಘ ಒತ್ತಾಯಿಸಿದೆ.
ರಾಜ್ಯ ಖಜಾನೆಗೆ ಅಕ್ರಮ ಕಲ್ಲುಗಣಿಗಾರಿಕೆ ಚಟುವಟಿಕೆ ಮೂಲಕ ಆಗುತ್ತಿರುವ ರಾಜಧನ ಸಂಗ್ರಹ (ರಾಯಲ್ಟಿ)ದ ನಷ್ಟವನ್ನು ಭರಿಸಲು ವೈಜ್ಞಾನಿಕವಾಗಿ ಎಂಡ್ ಪಾಯಿಂಟ್ ರಾಜಧನ ಸಂಗ್ರಹಕ್ಕೆ ಸರಕಾರ ಮುಂದಾಗಬೇಕು. ಇದು ಅಕ್ರಮ ಗಣಿಗಾರಿಕೆ ಮತ್ತು ಸಾಗಾಟಕ್ಕೆ ನಿಯಂತ್ರಣ ಹೇರಲಿದೆ ಎಂದು ಸಂಘದ ಅಧ್ಯಕ್ಷ ಮನೋಜ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ನಿಬಂಧನೆ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲು ಸಂಘ ಸಿದ್ದವಿದೆ. ವಿವಿಧ ಸಿಎಜಿ ವರದಿಗಳ ಪ್ರಕಾರ ಒಟ್ಟು ರಾಯಲ್ಟಿಯ ಶೇ. 75ರಿಂದ ಶೇ. 78ರಷ್ಟನ್ನು ಅಂತಿಮ ಹಂತದಲ್ಲಿ ಸಂಗ್ರಹಿಸಲಾಗುತ್ತದೆ. ವಿವಿಧ ಸರಕಾರಿ ಏಜೆನ್ಸಿಗಳ ಗುತ್ತಿಗೆದಾರರಿಂದ ರಾಯಲ್ಟಿ ಮೊತ್ತವನ್ನು ವಿವಿಧ ಕೆಲಸಗಳಿಗೆ ಬಿಲ್ ಮೊತ್ತವನ್ನು ಪಾವತಿಸುವ ಸಂದರ್ಭ ಕಡಿತಗೊಳಿಸಲಾಗುತ್ತದೆ. ಉಳಿದ ಶೇ 22ರಿಂದ 25ರಷ್ಟು ರಾಯಧನವನ್ನು ಇತರ ಮೂಲಗಳಿಂದ ಸಂಗ್ರಹಿಸಲಾಗುತ್ತದೆ. ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ (ಹೊಸೂರಿನ ತಮಿಳುನಾಡು ಗಡಿಯಲ್ಲಿ ಬಳಕೆದಾರರ ಶುಲ್ಕ ಗೇಟ್‌ನ್ನು ಸ್ಥಾಪಿಸಿದಾಗ ಡಾಟಾ ಲಭ್ಯವಾಗಿದೆ) 9000 ಟ್ರಕ್ ಲೋಡ್ ಜಲ್ಲಿಯನ್ನು ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಹಾಗೂ ಗೋವಾದಿಂದ ಕರ್ನಾಟಕಕ್ಕೆ ತರಲಾಗಿತ್ತು. ಇದರ ಪರಿಣಾಮ ದಿನಕ್ಕೆ 2.25 ಕೋಟಿ ರೂ. ನಷ್ಟವಾಗುತ್ತಿದ್ದು, ಈ ಮೂಲಕ ವಾರ್ಷಿಕ ಸುಮಾರು 825 ಕೋಟಿ ರೂ. ನಷ್ಟವಾಗುತ್ತಿದೆ. ರಾಜ್ಯ ಸರಕಾರಕ್ಕೆ ರಾಯಧನ ಸಂಗ್ರಹದ ಜತೆಗೆ ತನ್ನ ಜಿಎಸ್‌ಟಿ ಆದಾಯದಿಂದ ವರ್ಷಕ್ಕೆ 100 ಕೋಟಿ ರೂ. ವಂಚನೆಯಾಗುತ್ತಿದೆ. 20013ರಿಂದೀಚೆಗೆ ಜಲ್ಲಿ ಕೊರತೆಯಿಲ್ಲ. ಹೀಗಾಗಿ ಖನಿಜಗಳ ಬೇಡಿಕೆಯನ್ನು ಅಕ್ರಮವಾಗಿ ಸರಬರಾಜು ಮಾಡುವ ಮೂಲಕ ಮತ್ತು ಇತರ ರಾಜ್ಯಗಳಿಂದ ಪೂರೈಕೆ ಮಾಡಲಾಗುತ್ತಿದೆ. ಇದು ಕಾನೂನು ರೀತಿಯಲ್ಲಿ ಕ್ರಷರ್ ನಡೆಸುತ್ತಿರುವ ಮಾಲಕರಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
2017ರಿಂದ ಕ್ವಾರಿ ಮಾಲಕರ ಮೇಲೆ ದಂಡ ವಿಸಲಾಗುತ್ತಿದೆ. ಆಧಾರ ರಹಿತ ದಂಡದಿಂದ ಕೆಲ ವರ್ಷಗಳಿಂದೀಚೆಗೆ ಕ್ವಾರಿ ನಡೆಸುವ ಮಾಲಕರು ಹಿಂದಿನ ಗಣಿಗಾರಿಕೆಯ ಆಧಾರದಲ್ಲಿ ಲಕ್ಷಾಂತರ ದಂಡ ತೆರಬೇಕಾದ ಪ್ರಮೇಯ ಎದುರಾಗಿದೆ. ಸಿಎಜಿ ವರದಿ ಪ್ರಕಾರ ಶೇ. 70ಕ್ಕಿಂತ ಹೆಚ್ಚಿನ ಮೊತ್ತವನ್ನು ಸರಕಾರಿ ವರ್ಕ್ ಎಕ್ಸಿಕ್ಯೂಷನ್ ಡಿಪಾರ್ಟ್‌ಮೆಂಟ್ ಮತ್ತು ಏಜೆನ್ಸಿಗಳು (ಡಬ್ಲ್ಯೂಇಡಿಎ) ಬಳಸುತ್ತಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯು ರಾಯಲ್ಟಿ ಸಂಗ್ರಹವನ್ನು ಸುಲಭಗೊಳಿಸಲು ಗುತ್ತಿಗೆದಾರರ ಬಿಲ್‌ಗಳ ಬಿಡುಗಡೆಯ ಸಮಯ ರಾಯಲ್ಟಿ ಕಡಿತಗೊಳಿಸಲು ಈ ಸರಕಾರಿ ಡಬ್ಲ್ಯೂಇಡಿಎಗಳಿಗೆ ನಿಬಂಧನೆ ಮಾಡಿದೆ. ಈ ನಿಬಂಧನೆಯಿಂದ ಗುತ್ತಿಗೆದಾರರು ಕ್ವಾರಿ ಮಾಲಕರಿಂದ ಪರವಾನಿಗೆ ಪಡೆಯಲು ನಿರಾಕರಿಸುತ್ತಾರೆ. ಇಲಾಖೆಯು ಈಗ ಅದೇ ವಸ್ತುಗಳಿಗೆ ದಂಡದೊಂದಿಗೆ ರಾಯಲ್ಟಿ ಪಾವತಿಸಲು ಕ್ವಾರಿ ಮಾಲಕರನ್ನು ಒತಾಯಿಸುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಆಗಿರುವ ಅನ್ಯಾಯದ ಕುರಿತು ಹಲವು ಕ್ವಾರಿ ಮಾಲಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಸರಕಾರವು ಸಂಘದ ಪ್ರತಿನಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ವಹಿಸಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವತ್ತ ಹೆಜ್ಜೆ ಇರಿಸಬೇಕು ಎಂದು ಅವರು ಹೇಳಿದರು.
ಸಂಘದ ಕೋಶಾಕಾರಿ ಸಾಜು ನೀಲಿಯಾರ, ಕಾರ್ಯದರ್ಶಿ ಸುರೇಶ್ ಕಾಮತ್, ಜತೆ ಕಾರ್ಯದರ್ಶಿ ರಕ್ಷಣ್ ಮೇಲಾಂಟ ಉಪಸ್ಥಿತರಿದ್ದರು.