ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಉಳಿದಿಲ್ಲ: ಸುನಿಲ್ ಕುಮಾರ್ ಬಜಾಲ್

ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಉಳಿದಿಲ್ಲ: ಸುನಿಲ್ ಕುಮಾರ್ ಬಜಾಲ್


ಮಂಗಳೂರು: ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನವಾದುದ್ದು.ಅಂತಹ ಕಾರ್ಮಿಕ ವರ್ಗದ ಉತ್ತಮ ಬದುಕಿಗಾಗಿ ಅವಿಶ್ರಾಂತವಾಗಿ ಶ್ರಮಿಸಬೇಕಾದ ಆಳುವ ವರ್ಗಗಳು ನಿತ್ಯ ನಿರಂತರವಾಗಿ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡಲು ಹಾತೊರೆಯುತ್ತಿದೆ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಇವತ್ತಿನವರೆಗೆ ಉಳಿದಿಲ್ಲ, ಜೊತೆಗೆ ಮಣ್ಣು ಮುಕ್ಕಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಅವರು ನಗರದಲ್ಲಿ ಇಂದು ಸಿಐಟಿಯು ನೇತೃತ್ವದಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಾರ್ಮಿಕ ವರ್ಗದ ಪ್ರಶ್ನೆಗಳು ಪ್ರಧಾನ ಚರ್ಚೆಗೆ ಒಳಪಡಿಸುವ ಉದ್ದೇಶದಿಂದ ಸಿಐಟಿಯು ಡಿಸೆಂಬರ್ 17, 18, 19ರಂದು ರಾಜ್ಯಾದ್ಯಂತ ಹೋರಾಟ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೋಟ್ಟು ಅವರು, ದೇಶದ ಕಾರ್ಮಿಕ ವರ್ಗ ದೀರೋದ್ದತ್ತ ಹೋರಾಟದ ಮೂಲಕ ಗಳಿಸಿದ ಕಾನೂನುಗಳನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ನಾಶ ಮಾಡಿ ಸಂಹಿತೆಗಳನ್ನಾಗಿ ಮಾಡಲು ಹೊರಟಿರುವುದು ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸುವ ಸೂಚಕವಾಗಿದೆ. ಸಂಸತ್ತಿನೊಳಗಡೆ ರಚನೆಗೊಂಡಿರುವ ಲೇಬರ್ ಸ್ಟಾಂಡಿಂಗ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಮಿಕ ವಿರೋಧಿಯಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಆಯ್ಕೆಯಾಗಿರುವುದರಿಂದ ಕಾರ್ಮಿಕ ವರ್ಗಕ್ಕೆ ನ್ಯಾಯ ಸಿಗುವುದೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ಅವರು, ಕಾರ್ಮಿಕ ವರ್ಗದ ಪ್ರಶ್ನೆಗಳನ್ನು ಮುಂಚೂಣಿಗೆ ತರುತ್ತಾ, ಅಸಂಘಟಿತ ಕ್ಷೇತ್ರದ ಅಸಂಖ್ಯಾತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಈ ಕೂಡಲೇ ಜಾರಿಗೊಳಿಸಬೇಕು,ಗುತ್ತಿಗೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಸರಕಾರ ಗಮನ ಹರಿಸಬೇಕು, ಮಹಿಳಾ ಕಾರ್ಮಿಕರ ಬವಣೆಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಒತ್ತಾಯಿಸಿದರು.

ಸಭೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕರಾದ ವಸಂತ ಆಚಾರಿ, ಬಿ.ಎಂ. ಭಟ್, ಜಯಂತಿ ಶೆಟ್ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ತರಾಟೆಗೆ ತೆಗೆದುಕೊಂಡರು.


ಪ್ರತಿಭಟನೆಯಲ್ಲಿ ರೈತ ಸಂಘಟನೆಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಯುವಜನ ಮುಖಂಡರಾದ ಜಗದೀಶ್ ಬಜಾಲ್ ಅವರು ಭಾಗವಹಿಸಿದ್ದರು. ಹೋರಾಟದ ನೇತೃತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ರಾಧಾ ಮೂಡಬಿದ್ರೆ, ಭವಾನಿ ವಾಮಂಜೂರು, ರೋಹಿದಾಸ್, ಸುಂದರ ಕುಂಪಲ, ನೋಣಯ್ಯ ಗೌಡ, ಯಶೋಧ ಮಳಲಿ, ಲಕ್ಷ್ಮಿ, ಗಿರಿಜಾ ಮೂಡಬಿದ್ರೆ, ಲೋಲಾಕ್ಷಿ, ನಾಗೇಶ್ ಕೋಟ್ಯಾನ್, ಭಾರತಿ ಬೋಳಾರ, ಜಯಲಕ್ಷ್ಮಿ, ದಿನೇಶ್ ಶೆಟ್ಟಿ, ಮುಝಾಫರ್, ಸಂತೋಷ್ ಆರ್.ಎಸ್, ವಿಜಯ, ಚಂದ್ರಹಾಸ, ರಫೀಕ್ ಹರೇಕಳ, ಕೃಷ್ಣಪ್ಪ ಮೂಡಬಿದ್ರೆ, ಸೀತಾರಾಮ ಶೆಟ್ಟಿ, ಜಯಂತ ನಾಯಕ್, ವಿಲಾಸಿನಿ, ಗಿರಿಜಾ, ಪುಷ್ಪಾ ಮತ್ತಿತರರು ವಹಿಸಿದ್ದರು. 

ಬಳಿಕ ಸಿಐಟಿಯುನ ಉನ್ನತ ಮಟ್ಟದ ನಿಯೋಗವೊಂದು ಮುಖ್ಯಮಂತ್ರಿಗಳಿಗೆ ದ.ಕ. ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಅರ್ಪಿಸಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article